ಬೆಂಗಳೂರು, ಸೆ.15: ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ (Accident) ಸಂಭವಿಸಿದೆ. 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತವಾಗಿದ್ದು ಅಪಘಾತದ ರಭಸಕ್ಕೆ ಸ್ಲೀಪರ್ ಕೋಚ್ ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಬಸ್ ಕ್ಲೀನರ್, ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳಿಗೆ ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತಕ್ಕೀಡಾದ ಲಾರಿಗೆ ಹಿಂದಿನಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಕಾರು, ಬಸ್, ಲಾರಿ ಸರಣಿ ಅಪಘಾತದಿಂದ ಟ್ರಾಫಿಕ್ಜಾಮ್ ಉಂಟಾಗಿತ್ತು. ಈ ವೇಳೆ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕ್ಯಾಂಟರ್ ವಾಹನ ಪಲ್ಟಿಯಾಗಿದೆ. ಪಲ್ಟಿಯಾದ ಕ್ಯಾಂಟರ್ಗೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಸದ್ಯ ಅಪಘಾತ ಹಿನ್ನೆಲೆ ಹೆದ್ದಾರಿಯಲ್ಲಿ ಒಂದು ಬದಿಯ ರಸ್ತೆ ಬಂದ್ ಮಾಡಲಾಗಿದೆ.
ಒಂದೇ ರಸ್ತೆಯಲ್ಲಿ ಎರಡು ಕಡೆಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸರಣಿ ಅಪಘಾತಕ್ಕೆ ಕಾರಣವಾದ ಕಾರು, ಲಾರಿ ಚಾಲಕರು ಪರಾರಿಯಾಗಿದ್ದಾರೆ. ಇಬ್ಬರು ಚಾಲಕರು ವಾಹನಗಳ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಉಳಿದಿರುವ 2 ಲಾರಿ, ಒಂದು ಬಸ್ ಉಳಿದಿದ್ದು ಕ್ರೇನ್ ಮೂಲಕ ಅಪಘಾತಕ್ಕೀಡಾದ ವಾಹನಗಳ ತೆರವು ಕಾರ್ಯ ಮಾಡಲಾಗುತ್ತಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿ
ಇನ್ನು ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಬಾಳಿಗಾ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಹೊಸೂರು ಸರ್ಕಲ್ನಿಂದ ಕೇಶ್ವಾಪುರ ಕಡೆ ಹೊರಟಿದ್ದ KA 25 MA 5531 ನಂಬರ್ನ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ಸ್ಥಳದಿಂದ 50 ಮೀ. ದೂರದಲ್ಲಿ ಹೋಗಿ ಕಾರು ಬಿದ್ದಿದೆ. ಸ್ಥಳಕ್ಕೆ ಪೂರ್ವ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದ ಕಾರನ್ನು ಪೊಲೀಸರು ತೆರವು ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ