ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ
ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಅಶೋಕ ನಗರ ಠಾಣೆ ಪೊಲೀಸರು ಆರ್. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಿದ್ದಾರೆ. ಪೊಲೀಸರು ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಬೆಂಗಳೂರು, ಸೆಪ್ಟೆಂಬರ್ 15: ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ (Police custody) ನೀಡಿದ್ದಾರೆ. ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿ ಕರೆತಂದರು. ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಪೊಲೀಸರು ಒಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಗೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಮಧ್ಯರಾತ್ರಿ ಒಂದುವರೆ ಗಂಟೆ ವಿಚಾರಣೆ
ಬಂಧನ ಬಳಿಕ ಬಿಜೆಪಿ ಶಾಸಕ ಮುನಿರತ್ನ ಮಂಕಾಗಿದ್ದರು. ಶನಿವಾರ ಸಂಜೆ ಏನೂ ಮಾತನಾಡದೆ ಮೌನಕ್ಕೆ ಜಾರಿದ್ದರು. ಪೊಲೀಸರು ಶಾಸಕ ಮುನಿರತ್ನ ಅವರನ್ನು ಅಶೋಕ್ನಗರ ಠಾಣೆಗೆ ಕರೆತಂದರು. ಮಧ್ಯರಾತ್ರಿ 12 ರಿಂದ 1.30ರವರೆಗೆ ಸತತ ಒಂದುವರೆ ಗಂಟೆಗಳ ಕಾಲ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ನಡೆಸಿದರು.
ತನಿಖಾಧಿಕಾರಿಗಳ ಪ್ರಶ್ನೆಗೆ ಶಾಸಕ ಮುನಿರತ್ನ ನಾನೇನು ಮಾಡಿಲ್ಲ, ಷಡ್ಯಂತ್ರ ಅಂತ ಉತ್ತರ ನೀಡಿದ್ದಾರೆ. ನ್ಯಾಯಾದೀಶರ ಮುಂದೆಯೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಅಂತ ಮುನಿರತ್ನ ಹೇಳಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ ಬಿಜೆಪಿ ಶೋಕಾಸ್ ನೋಟಿಸ್
ಏನಿದು ಮುನಿರತ್ನ ಪ್ರಕರಣ?
ಗುತ್ತಿಗೆದಾರ ಚಲುವರಾಜು ಎಂಬವರು ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಲ್ಲದೆ, ರಕ್ಷಣ ನೀಡುವಂತೆ ಮನವಿ ಮಾಡಿದ್ದರು. ಜೀವ ಬೆದರಿಕೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಪ್ರಮುಖ ಆರೋಪಿ ಶಾಸಕ ಮುನಿರತ್ನ ಆಗಿದ್ದಾರೆ. ಎ2 ಮುನಿರತ್ನರ ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.
ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ
ಶಾಸಕ ಮುನಿರತ್ನ ಸೆಪ್ಟೆಂಬರ್ 9 ರಂದು 20 ಲಕ್ಷ ರೂಪಾಯಿ ಹಣ ಕೇಳಿದ್ದರು. ದುಡ್ಡು ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟೇ ಅಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಅಷ್ಟರಲ್ಲಾಗಲೇ ಮುನಿರತ್ನ ನಾಪತ್ತೆಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Sun, 15 September 24