ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಶಾಸಕ ಮುನಿರತ್ನಗೆ ಬಿಜೆಪಿ ಶೋಕಾಸ್ ನೋಟಿಸ್
ಜೀವ ಬೆದರಿಕೆ, ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೊನೆಗೂ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಐದು ದಿನಗಳ ಒಳಗಾಗಿ ಸ್ಪಷ್ಠೀಕರಣ ನೀಡುವಂತೆ ನೋಟಿಸ್ ನೀಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 14: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಮತ್ತು ಗುತ್ತಿಗೆದಾರ ಚಲುವರಾಜು ಅವರದ್ದು ಎನ್ನಲಾದ ಆಡಿಯೋ ಈಗ ಮುನಿರತ್ನಗೆ ಸಂಕಷ್ಟ ತಂದೊಡ್ಡಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಶಾಸಕ ಮುನಿರತ್ನಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಬಿಜೆಪಿ ನೋಟಿಸ್ನಲ್ಲೇನಿದೆ?
ಮಾಧ್ಯಮದಲ್ಲಿ ನೀವು ಅವಹೇಳನಕಾರಿಯಾಗಿ ಮಾತನಾಡಿರುವಂತೆ ಪ್ರಸರಣಗೊತ್ತಿದೆ. ಇದಕ್ಕೆ ಕುರಿತಂತೆ ತಮ್ಮ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ಧಕ್ಕೆಯನ್ನುಂಟು ಮಾಡಿದೆ. ಹಾಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಐದು ದಿನಗಳ ಒಳಗಾಗಿ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಠೀಕರಣ ನೀಡಬೇಕೆಂದು ನೋಟಿಸ್ ನೀಡಲಾಗಿದೆ.
ಮುನಿರತ್ನ ವಿರುದ್ಧ ಕಾಂಗ್ರೆಸ್ ದೂರು
ಒಂದು ಕಡೆ ಬಿಜೆಪಿ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದರೆ, ಇನ್ನೊಂದೆಡೆ ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶೇಷಾದ್ರಿಪುರಂ ಎಸಿಪಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ದೂರು ನೀಡಿದೆ. ಜಾತಿನಿಂದಕ ಮುನಿರತ್ನರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಬಂಧನ
ಹಣಕಾಸಿನ ವಿಚಾರವಾಗಿ ಚಲುವರಾಜು ಅವರನ್ನ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಎರಡು ಎಫ್ಐಆರ್ ದಾಖಲಾಗಿದ್ದು, ಮುನಿರತ್ನರನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಮುನಿರತ್ನ
ಬೆಂಗಳೂರಿನ ಲಕ್ಷ್ಮೀದೇವಿ ನಗರ ವಾರ್ಡ್‌ನಲ್ಲಿ ಕಸ ವಿಲೇವಾರಿ ಕೆಲಸದ ಸಂಬಂಧ ಮುನಿರತ್ನ ಲಂಚ ಕೇಳುತ್ತಿದ್ದಾರೆ ಅಂತಾ ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದಾರೆ. ಆರಂಭದಲ್ಲಿ ಶಾಸಕರಿಗೆ ಹೆದರಿ 20 ಲಕ್ಷ ರೂಪಾಯಿ ಲಂಚ ಕೊಟ್ಟಿದ್ದೇನೆ. ಶಾಸಕರು ತಮ್ಮ ಮನೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ, ಮಕ್ಕಳನ್ನು ಕೇಳಿದ್ದಾರೆ ಚಲುವರಾಜು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.