ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಬಂಧನ
ಜೀವ ಬೆದರಿಕೆ, ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೊನೆಗೂ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪ ಕೇಳಿಬಂದ ನಂತರ ತಲೆಮರೆಸಿಕೊಂಡಿದ್ದ ಅವರನ್ನು ಶನಿವಾರ ಸಂಜೆ ಕೋಲಾರದ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಬಂಧಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 14: ಗುತ್ತಿಗೆದಾರ ಚಲುವರಾಜು ಅವರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬೆಂಗಳೂರಿನ ಆರ್‌ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಅವರನ್ನು ಬಂಧಿಸಲಾಗಿದೆ.
ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ಮೊಬೈಲ್ ಫೋನ್ ಲೊಕೇಷನ್ ಆಧರಿಸಿ ಪತ್ತೆ ಮಾಡಲಾಗಿದೆ. ನಂತರ ಪೊಲೀಸರು ಅವರನ್ನು ಬಂಧಿಸಲಾಗಿದೆ. ಕೇಸ್ ದಾಖಲಾದಾಗಿನಿಂದ ಮುನಿರತ್ನ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ಸದ್ಯ ಮುನಿರತ್ನರನ್ನು ಬಂಧಿಸಿ ಕೋಲಾರ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿಗೆ ಕರೆತಂದ ಬಳಿಕ ಅವರನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ಏನಿದು ಮುನಿರತ್ನ ಪ್ರಕರಣ?
ಗುತ್ತಿಗೆದಾರ ಚಲುವರಾಜು ಎಂಬವರು ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ದೂರು ನೀಡಿದ್ದಲ್ಲದೆ, ರಕ್ಷಣ ನೀಡುವಂತೆ ಮನವಿ ಮಾಡಿದ್ದರು. ಜೀವ ಬೆದರಿಕೆ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಪ್ರಮುಖ ಆರೋಪಿ ಶಾಸಕ ಮುನಿರತ್ನ ಆಗಿದ್ದಾರೆ. ಎ2 ಮುನಿರತ್ನರ ಆಪ್ತ ಸಹಾಯಕ ವಿಜಯ್ ಕುಮರ್, ಎ3 ಸೆಕ್ಯೂರಿಟಿ ಅಭಿಷೇಕ್ ಮತ್ತು ಎ4 ವಸಂತ್ ಕುಮಾರ್ ಆಗಿದ್ದಾರೆ.
ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ
ಶಾಸಕ ಮುನಿರತ್ನ ಸೆಪ್ಟೆಂಬರ್ 9 ರಂದು 20 ಲಕ್ಷ ರೂಪಾಯಿ ಹಣ ಕೇಳಿದ್ದರು. ದುಡ್ಡು ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟೇ ಅಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಮುನಿರತ್ನ ಅವರಿಗೆ ನೋಟಿಸ್ ನೀಡಲು ವೈಯಾಲಿಕಾವಲ್ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಅಷ್ಟರಲ್ಲಾಗಲೇ ಮುನಿರತ್ನ ನಾಪತ್ತೆಯಾಗಿದ್ದರು.
ಆರೋಪಗಳನ್ನು ನಿರಾಕರಿಸಿದ್ದ ಮುನಿರತ್ನ
ಈ ಮಧ್ಯೆ, ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು. ಗುತ್ತಿಗೆದಾರ ಚಲುವರಾಜುಗೆ ಬೆದರಿಕೆ ಹಾಕಿದ್ದು ಆಡಿಯೊದಲ್ಲಿ ಕೇಳಿಬಂದಿತ್ತು. ಆದರೆ, ಈ ವಿಚಾರವಾಗಿ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದ ಮುನಿರತ್ನ, ಆಡಿಯೋ ತಮ್ಮದಲ್ಲ. ಒಂದು ವೇಳೆ, ಆಡಿಯೋ ನನ್ನದೇ ಎಂದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಇದನ್ನೂ ಓದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ: ಮುನಿರತ್ನ ವಿರುದ್ಧ ಎರಡು ಎಫ್ಐಆರ್
ಮುನಿರತ್ನ ವಿರುದ್ಧದ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮುನಿರತ್ನ ಪ್ರಕರಣ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sat, 14 September 24