ಮಕ್ಕಳ ಶವ ಸಾಗಾಟಕ್ಕೂ ಹಣವಿಲ್ಲದೆ ಒದ್ದಾಡುತ್ತಿದ್ದ ತಂದೆಗೆ ಟಿವಿ9 ತಂಡ ನೆರವು, ಕಣ್ಣಲ್ಲಿ ನೀರು ತುಂಬುತ್ತೆ ಈ ಅಪ್ಪನ ಮನಕಲಕುವ ಕಥೆ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 21, 2024 | 9:24 PM

ಆ ಅಣ್ಣ-ತಮ್ಮಂದಿರು ಕುಚುಕು ಗೆಳೆಯರಂತಿದ್ದರು. ಶಾಲೆಯಿಂದ ಬಂದು ಮನೆಯಲ್ಲಿ ಊಟ ಮುಗಿಸಿ ಬಯಲು ಬಹಿರ್ದೆಸೆಗೆ ಹೋಗಿದ್ದರು. ಬಳಿಕ ನೀರನ್ನ ಕಂಡು ಈಜಲು ತೆರಳಿದವರು ವಾಪಸ್ ಬರಲೇ ಇಲ್ಲ. ನೀರಿನಲ್ಲಿ ಉಸಿರು ಚೆಲ್ಲಿದ ಸಹೋದರರ ಶವ ಸಾಗಾಟಕ್ಕೂ ಹಣವಿಲ್ಲದೆ ಒದ್ದಾಟ ಮಾಡುತ್ತಿದ್ದ ತಂದೆಗೆ ನಿಮ್ಮ ಟಿವಿ9 ತಂಡ ಸಹಕಾರಿ ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಮಕ್ಕಳ ಶವ ಸಾಗಾಟಕ್ಕೂ ಹಣವಿಲ್ಲದೆ ಒದ್ದಾಡುತ್ತಿದ್ದ ತಂದೆಗೆ ಟಿವಿ9 ತಂಡ ನೆರವು, ಕಣ್ಣಲ್ಲಿ ನೀರು ತುಂಬುತ್ತೆ ಈ ಅಪ್ಪನ ಮನಕಲಕುವ ಕಥೆ!
ಮಕ್ಕಳ ಶವ ಸಾಗಾಟಕ್ಕೂ ಹಣವಿಲ್ಲದೆ ಒದ್ದಾಡುತ್ತಿದ ತಂದೆಗೆ ಟಿವಿ9 ತಂಡ ನೆರವು
Follow us on

ಬೆಂಗಳೂರು, ಆ.21: ಶವಾಗಾರದಲ್ಲಿರುವ ಇಬ್ಬರು ಪುಟ್ಟ ಮಕ್ಕಳ ಪಾರ್ಥೀವ ಶರೀರ, ಮಕ್ಕಳ ಶವವನ್ನು ನೋಡಿ ಕುಟುಂಬಸ್ಥರ ಗೋಳಾಟ, ಇನ್ನೊಂದೆಡೆ ಮಕ್ಕಳ ಶವ ಸಾಗಿಸಲು ಹಣವಿಲ್ಲದೆ ಶವಾಗಾರದ ಮುಂದೆ ಗೋಳಾಡುತ್ತಿರುವ ಹೆತ್ತ ತಂದೆ. ಈ ಗೋಳಾಟದ ದೃಶ್ಯ ಕಂಡ ಟಿವಿ9 ತಂಡ, ಏನಿದು ಎಂದು ಅವರನ್ನ ವಿಚಾರಿಸಿದಾಗ, ‘ಇಲ್ಲೊಂದು ಕರುಳು ಹಿಂಡುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ತಂದೆಗೆ ಮಕ್ಕಳನ್ನ ಕಳೆದುಕೊಂಡಿರುವ ನೋವು ಒಂದೆಡೆಯಾದರೆ, ಮಕ್ಕಳ‌ ಶರೀರವನ್ನ ತನ್ನೂರಿಗೆ ಸಾಗಿಸಲು ಹಣವಿಲ್ಲದ ಕರುಣಾಜನಕ ಕಥೆ ಇನ್ನೊಂದು ಕಡೆ.

ಕೂಲಿ ಕೆಲಸಕ್ಕೆಂದು ಬಂದಿದ್ದ ಕುಟುಂಬ

ಹೌದು,   9 ವರ್ಷದ ಅಂಬರೀಶ ಹಾಗೂ 7 ವರ್ಷದ ಸಂತೋಷ್​, ಎಂಬುವವರು ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪ ಬಳಿ ಇರುವ ಬಿಕೆ ನಗರದಲ್ಲಿ ವಾಸಿಸುತ್ತಿದ್ದರು. ನಿನ್ನೆ(ಆ.20) ಸಂಜೆ ಶಾಲೆಯಿಂದ ಮನೆಗೆ ಬಂದ ಬಳಿಕ ಬಹಿರ್ದೆಸೆಗೆಂದು ತೆರಳಿದವರು, ಅಲ್ಲೆ ಇದ್ದ ಯಾರೋ ಮಣ್ಣು ತಗೆದ ಹೊಂಡದಲ್ಲಿ ಈಜಲು ತೆರಳಿ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಇವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರಾಗಿದ್ದು, ದೂರದ ಜೇವರ್ಗಿಯಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಅಂದು ದುಡಿದು ಅಂದೇ ತಿನ್ನುವ ಪರಿಸ್ಥಿತಿಯಲ್ಲಿದ್ದ ಕುಟುಂಬ, ತನ್ನ ವಂಶದ ಕುಡಿಯನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿತ್ತು.

ಇದನ್ನೂ ಓದಿ:ಇನ್ನೂ 5-6 ಲಕ್ಷ ರೈತರಿಗೆ ಬರ ಪರಿಹಾರ ನೆರವು ಸಿಕ್ಕಿಲ್ಲ, ಮುಂದಿನ ವಾರದೊಳಗೆ ಅವರಿಗೂ ಸಿಗಲಿದೆ: ಚಲುವರಾಯಸ್ವಾಮಿ

ಆಂಬುಲೆನ್ಸ್ ವ್ಯವಸ್ಥೆ ಮಾಡಿದ ಶಾಸಕ ಡಾ. ಅಜಯ್ ಸಿಂಗ್‌

ಇದನ್ನ ಮನಗಂಡ ಟಿವಿ9 ತಂಡ, ಮೃತ ಕುಟುಂಬಸ್ಥರ ಸಮಸ್ಯೆ ಆಲಿಸಿ ಅವರಿಗೆ ಶವ ಸಾಗಿಸುವುದು ಕಷ್ಟವಾಗಿದೆ ಎನ್ನುವ ಸಮಸ್ಯೆ ಬಗ್ಗೆ ತಿಳಿದುಕೊಂಡಿತು. ತಕ್ಷಣ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್‌ಗೆ ಕರೆ ಮಾಡಿದ ನಮ್ಮ ನೆಲಮಂಗಲ ಪ್ರತಿನಿಧಿ ಬಿ.ಮೂರ್ತಿ, ಕರೆ ಮಾಡಿದ ಕೇವಲ 10 ನಿಮಿಷದಲ್ಲೇ ಶಾಸಕರು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಶವ ಸಾಗಾಟಕ್ಕೆ ಅನುಕೂಲ ಮಾಡಿಕೊಟ್ಟರು. ಕುಟುಂಬಸ್ಥರಿಗೆ ಸಹಾಯ ಮಾಡಿದ್ದಕ್ಕೆ ಮೃತರ ಕುಟುಂಬಸ್ಥರು ಟಿವಿನೈನ್‌ಗೆ ಅಭಿನಂದನೆ ಸಲ್ಲಿಸಿದ್ರೆ, ನಮ್ಮ‌ತಂಡ ಶಾಸಕ ಅಜಯ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿತು.

ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇನೆ ಇರಲಿ ಬದುಕಿ ಬಾಳಬೇಕಿದ್ದ ಮಕ್ಕಳ ಜೀವನ ಕೊನೆಗೊಂಡಿರುವುದು ಬೇಸರದ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Wed, 21 August 24