ಬೆಂಗಳೂರು ಗ್ರಾಮಾಂತರ, ಫೆ.09: ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ (Dabaspete) ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ಹೆಸರಿನ ಕರ್ನಾಟಕ ವೇಸ್ಟ್ ಮ್ಯಾನೇಜ್ಮೆಂಟ್ ಪ್ರಾಜೆಕ್ಟ್ ಘಟಕದಲ್ಲಿ ಇಂದು(ಫೆ.09) ಬೃಹತ್ ಮೊತ್ತದ ಮಾದಕವಸ್ತುಗಳನ್ನ ಪೊಲೀಸರು ಸುಟ್ಟು ಬೂದಿಯನ್ನಾಗಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್(G Parameshwara) ಹಾಗೂ ಪೋಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಟನ್ ಗಟ್ಟಲೆ ಗಾಂಜಾ ಚೀಲಗಳನ್ನು ಭಸ್ಮ ಮಾಡಲಾಯಿತು.
ಮಾದಕ ವಸ್ತುಗಳ ಮಾರಾಟ ಮತ್ತು ದುರ್ಬಳಕೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2023ರಲ್ಲಿ “NDPS” ಕಾಯ್ದೆ ಅಡಿಯಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯಾದ್ಯಂತ ಡ್ರಗ್ಸ್ ಪ್ರಕರಣದಲ್ಲಿ ಬರೊಬ್ಬರಿ 7403 ಜನ ಆರೋಪಿತರನ್ನು ಹಾಗೂ 106 ವಿದೇಶಿಯರನ್ನು ಬಂಧಿಸಿ ಒಟ್ಟು 128.98 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಇಂದು ಕೇಂದ್ರ ವಲಯದ 6, ದಕ್ಷಿಣ ವಲಯದ 5 ಜಿಲ್ಲೆಗಳ ಜೊತೆಗೆ ಬೆಂಗಳೂರು ನಗರ ಹಾಗೂ ಮೈಸೂರು ನಗರದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶ ಮಾಡಲಾಯಿತು. ಮಾದಕ ವಸ್ತುಗಳನ್ನ ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 3885.5 ಕೆಜಿ ಗಾಂಜಾ, 52.5 ಕೆಜಿ ಎಂಡಿಎಂಎ, ಎಲ್‌ಎಸ್‌ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳು ಸೇರಿ ಒಟ್ಟು ಮೌಲ್ಯ 37 ಕೋಟಿ ರೂ. ಮೌಲ್ಯದ ಗಾಂಜಾ ನಾಶಮಾಡಲಾಯಿತು.
ಇದನ್ನೂ ಓದಿ:ಮಂಗಳೂರು: ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಪತ್ತೆ; ಸಿಸಿಬಿ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ
ಇನ್ನು ದಾಬಸ್ ಪೇಟೆಯಲ್ಲಿ 37 ಕೋಟಿ ಬೆಲೆಬಾಳುವ 5 ಟನ್ ಮಾದಕವಸ್ತು ನಾಶ ಮಾಡಿದ್ರೆ, ರಾಜ್ಯಾದ್ಯಂತ 9ಸಾವಿರದ 600ಕೋಟಿ ಮೌಲ್ಯದ 142 ಕೋಟಿಯಷ್ಟು ಜಪ್ತಿಯಾದ ಡ್ರಗ್ಸ್ಗೆ ಅಯಾ ಜಿಲ್ಲೆಗಳಲ್ಲೇ ಬೆಂಕಿ ಇಡುವ ಮೂಲಕ ನಾಶ ಮಾಡಲಾಯಿತು. ಈ ವೇಳೆ ಗೃಹ ಸಚಿವ ಪರಮೇಶ್ವರ್, ಬೆಂಗಳೂರು ನಗರ ಕಮಿಷನರ್ ದಯಾನಂದ್, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವಾರು ಜಿಲ್ಲೆಯ 16 ಜನ ಎಸ್ಪಿಗಳು ಭಾಗಿಯಾಗಿದ್ದರು.
ಈ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿಯೊಂದಿಗೆ ನಾಶ ಮಾಡಲಾಯಿತು. ಬೆಂಗಳೂರು ನಗರ, ರೈಲ್ವೆ, ಕೇಂದ್ರ ವಲಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ಕೆ.ಜಿಎಫ್, ಹಾಸನ, ಮಂಡ್ಯ, ಮೈಸೂರು, ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಡ್ರಗ್ಸ್ನ್ನು ಜಪ್ತಿ ಮಾಡಿದ್ದು ವಿಶೇಷವಾಗಿತ್ತು. ಒಟ್ಟಾರೆ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುವವರಿಂದ ವಶ ಪಡಿಸಿಕೊಂಡಿದ್ದ ಗಾಂಜಾವನ್ನು ಸುಡುವ ಮೂಲಕ, ಡ್ರಗ್ಸ್ಗೆ ದಾಸರಾಗುತ್ತಿದ್ದ ಅದೇಷ್ಟೋ ಯುವಕರನ್ನು ಪೋಲೀಸ್ ಇಲಾಖೆ ಪಾರು ಮಾಡಿದಂತಾಗಿದೆ. ಇನ್ನಾದರೂ ಯುವಕರು ಎಚ್ಚೆತ್ತುಕೊಂಡು ಡ್ರಗ್ಸ್ ಗಳಿಂದ ದೂರ ಇರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ