ಲಕ್ಷದಿಂದ ಕೋಟಿಗೆ ಜಿಗಿತ: ಐದೇ ವರ್ಷದಲ್ಲಿ 30 ಪಟ್ಟು ಏರಿದ ತೇಜಸ್ವಿ ಸೂರ್ಯ ಆಸ್ತಿ!

|

Updated on: Apr 05, 2024 | 9:26 PM

BJP MP Tejasvi Surya Assets: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ನಿನ್ನೆ(ಏಪ್ರಿಲ್ 04) ಅಷ್ಟೇ ತೇಜಸ್ವಿ ಸೂರ್ಯ ತಮ್ಮ ಅಪಾರ ಬೆಂಬಲಿಗರೊಂದಿಗೆ ರೋಡ್ ಶೋ ಮಾಡಿ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಉಮೇದುವಾರಿಗೆಯಲ್ಲಿ ತಮ್ಮ ಆಸ್ತಿ ಎಂದು ಘೋಷಣೆ ಮಾಡಿದ್ದಾರೆ. ಆದ್ರೆ, ತೇಜಸ್ವಿ ಸೂರ್ಯ ಅವರ ಅವರ ಆಸ್ತಿ ಕೇವಲ ಐದೇ ವರ್ಷದಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ. ಹಾಗಾದ್ರೆ, ಮೊದಲು ಸೂರ್ಯ ಆಸ್ತಿ ಎಷ್ಟಿತ್ತು? ಈಗ ಎಷ್ಟಾಗಿದೆ ಎನ್ನುವ ವಿವರ ಇಲ್ಲಿದೆ.

ಲಕ್ಷದಿಂದ ಕೋಟಿಗೆ ಜಿಗಿತ: ಐದೇ ವರ್ಷದಲ್ಲಿ 30 ಪಟ್ಟು ಏರಿದ ತೇಜಸ್ವಿ ಸೂರ್ಯ ಆಸ್ತಿ!
ತೇಜಸ್ವಿ ಸೂರ್ಯ
Follow us on

ಬೆಂಗಳೂರು, (ಏಪ್ರಿಲ್ 05): ಬಿಜೆಪಿ ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ (Tejasvi Surya) ನಾಮಪತ್ರ ಸಲ್ಲಿಸಿದ್ದಾರೆ. ಸೂರ್ಯ ತಮ್ಮ ಬಳಿ ಯಾವುದೇ ಸ್ವಂತ ಮನೆ, ಕಾರು ಅಥವಾ ಬೈಕ್ ಇಲ್ಲ ಎನ್ನುವದನ್ನು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. 2019 ರಲ್ಲಿ 13.46 ರೂ. ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ತೇಜಸ್ವಿ ಸೂರ್ಯ ಈ ಬಾರಿ 4.10 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಈ ಮೂಲಕ ಐದೇ ವರ್ಷದಲ್ಲಿ ಸೂರ್ಯ ಆಸ್ತಿಯಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ.

30 ಪಟ್ಟಿ ಆಸ್ತಿ ಹೆಚ್ಚಳ

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ತಮ್ಮ ಪ್ರಮಾಣ ಪತ್ರದಲ್ಲಿ 13.46 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಐದು ವರ್ಷಗಳ ನಂತರ ಸಂಸದರೂ, ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ತೇಜಸ್ವಿ ಸೂರ್ಯರ ಆಸ್ತಿ ಮೌಲ್ಯವು ರೂ. 4.10 ಕೋಟಿಗೆ ಏರಿಕೆಯಾಗಿದೆ. ಇದರೊಂದಿಗೆ ಈ ಕಳೆದ ಬಾರಿ ಹಾಗೂ ಈ ಬಾರಿಗೆ ಹೋಲಿಕೆ ಮಾಡಿದರೆ ಸೂರ್ಯ ಆಸ್ತಿಯಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ರದ್ದು ಮಾಡುವಂತೆ ಚುನಾವಣಾಧಿಕಾರಿಗೆ ದೂರು, ಕಾರಣವೇನು?

ಆಸ್ತಿ ಏರಿಕೆಗೆ ಕಾರಣವೇನು?

ಹೂಡಿಕೆಯಿಂದಲೇ ಕೋಟ್ಯಾಂತರ ರೂ. ಗಳಿಕೆ ಲೆಕ್ಕ ಕೊಟ್ಟಿದ್ದಾರೆ ತೇಜಸ್ವಿ ಸೂರ್ಯ. ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ಕೋಟಿ ಹೂಡಿಕೆ ಮಾಡಿದ್ದಾರೆ. 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದು, ವಿವಿಧ ವಿಮಾ ಕಂಪನಿಗಳಲ್ಲಿನ 25,28,446 ಲಕ್ಷ ವಿಮೆ ಮಾಡಿಸಿದ್ದಾರೆ. 80 ಸಾವಿರ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ ಇಟ್ಟಿದ್ದಾರೆ.  ತೇಜಸ್ವಿ ತಮ್ಮ ಹೆಚ್ಚಿನ ಹಣವನ್ನು ಮ್ಯೂಚುವಲ್ ಫಂಡ್‌ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಹೆಚ್ಚಾಗುತ್ತಿರುವುದೇ ಇವರ ಆಸ್ತಿ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.

ತೇಜಸ್ವಿ ಸೂರ್ಯ ವಿರುದ್ಧ ದೇಶಾದ್ಯಂತ ಕೇಸ್‌

ತೇಜಸ್ವಿ ಸೂರ್ಯ ವಿರುದ್ಧ ದೇಶಾದ್ಯಂತ ಕೇಸ್‌ಗಳೂ ದಾಖಲಾಗಿವೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು ಕೇಸ್ ಇದ್ದು, ನವದೆಹಲಿಯ ಸಿವಿಲ್ ಲೈನ್ಸ್​​ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಅವಮಾನ, ನಂಬಿಕೆಗೆ ಚ್ಯುತಿ, ಕಾನೂನುಬಾಹಿರವಾಗಿ ಗುಂಪು ಜಮಾವಣೆ, ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಗಲಾಟೆಗೆ ಸಂಬಂಧಿಸಿದ ಪ್ರಕರಣಗಳಿವೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.