
ಬೆಂಗಳೂರು, ಜೂನ್ 09: ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತ ಪ್ರಕರಣ ಇಡೀ ಕರುನಾಡಿಗೆ ಸೂತಕ ತಂದಿದೆ. ಸದ್ಯ ಈ ಪ್ರಕರಣ ರಾಜಕೀಯ ನಾಯಕರ ಜಟಾಪಟಿಗೆ ಆಹಾರವಾಗಿದೆ. ದುರಂತಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಿಚಿವ ಡಾ.ಪರಮೇಶ್ವರ್ (Dr G Parameshwara) ಹೊಣೆ ಎಂದು ವಿಪಕ್ಷಗಳು ಕಿಡಿಕಾರಿದ್ದವು. ಇದೇ ವೇಳೆ ಜಿ ಪರಮೇಶ್ವರ್, ಖಾತೆ ಬದಲಾಯಿಸಲು ಕೇಳಿದ್ದಾರೆ ಅನ್ನೋ ವದಂತಿ ಕೂಡ ಹಬ್ಬಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಿಚಿವರು, ಇದು ಸತ್ಯಕ್ಕೆ ದೂರವಾದದ್ದು, ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆಯ ಬಗ್ಗೆ ನಾನು ಸಿಎಂ ಬಳಿ ಹೇಳಿಕೊಂಡಿಲ್ಲ. ಖಾತೆ ಬದಲಾವಣೆಗೆ ಕೇಳಿದ್ದೇನೆ ಅನ್ನೋ ವಿಚಾರವನ್ನು ಹೇಳಿದ್ಯಾರು? ಏನೇ ಇದ್ದರೂ ನನ್ನನ್ನೇ ಕೇಳಬೇಕು ಅಲ್ಲವೇ. ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ. ಒಬ್ಬರ ವ್ಯಕ್ತಿತ್ವ ಕೊಲೆ ಮಾಡಬಾರದು, ಇದು ಶೋಭೆ ತರುವುದಿಲ್ಲ. ಏನೇ ಇದ್ದರೂ ನನ್ನನ್ನೇ ಕೇಳಿ, ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸೌಧವನ್ನ ಸಿಎಂ, ಸ್ಟೇಡಿಯಂನ್ನು ಡಿಕೆಶಿ ಹಂಚಿಕೊಂಡಂತೆ ಕಾಣ್ತಿದೆ: ಆರ್. ಅಶೋಕ್ ತಿರುಗೇಟು
ನನ್ನ ಪತ್ನಿ ಬಳಿಯೂ ರಾಜಕೀಯ ವಿಚಾರದ ಬಗ್ಗೆ ಮಾತನಾಡಲ್ಲ. ಖಾತೆ ಬದಲಾಯಿಸಿ ಅಂತಾ ಸಿಎಂ ಬಳಿ ಹೇಳಿದ್ದಾರೆ ಎಂದಿದ್ಯಾರು? ಇಂತಹ ಖಾತೆಯೇ ಬೇಕು ಎಂದು ನಾನು ಯಾವತ್ತೂ ಕೇಳಿಲ್ಲ. ಬೆಂಗಳೂರು ಘಟನೆಯಿಂದ ನಾವೂ ನೋವು ಅನುಭವಿಸುತ್ತಿದ್ದೇವೆ. ಇದು ಸವಾಲು, ಇದನ್ನು ಎದುರಿಸಬೇಕು ಎಂದಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ಗೆ ದೂರವಾಣಿ ಮೂಲಕ ಮಾಹಿತಿ ಕೊಟ್ಟಿದ್ದೇವೆ. ಆದರೆ ಯಾರೂ ನಮ್ಮನ್ನು ದೆಹಲಿಗೆ ಕರೆದಿಲ್ಲ, ಮುಂಬೈಗೂ ಕರೆದಿಲ್ಲ. ಇದು ಸತ್ಯಕ್ಕೆ ದೂರವಾದದ್ದು. ಹೈಕಮಾಂಡ್ನವರು ಮಾಹಿತಿ ಕೇಳ್ತಾರೆ, ಅವರಿಗೆ ಆತಂಕ ಇರುತ್ತೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಮಾಹಿತಿ ಕೇಳುತ್ತಾರೆ ಎಂದು ಹೇಳಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆ ಕೇಸ್ ತನಿಖೆ NIAಗೆ ವಹಿಸಿರುವ ವಿಚಾರವಾಗಿ ಮಾತನಾಡಿದ್ದು, NIAಗೆ ವಹಿಸಿದ ಬಗ್ಗೆ ಕೇಂದ್ರ ಗೃಹ ಇಲಾಖೆ ಪತ್ರ ಬಂದಿದೆ. ಈ ಪತ್ರದ ಬಗ್ಗೆ ಇಂದು ಸಭೆ ನಡೆಸುತ್ತೇನೆ. NIAಗೆ ಪ್ರಕರಣ ನೀಡಬೇಕಾ ಬೇಡ್ವಾ ಎಂದು ನಿರ್ಧರಿಸುತ್ತೇವೆ. ಎನ್ಐಎ ತನಿಖೆಗೆ ಯಾರು ರೆಫರ್ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಪೊಲೀಸರು ಕೂಡ ಸಮರ್ಥವಾಗಿ ತನಿಖೆ ಮಾಡ್ತಿದ್ದಾರೆ. ಯಾವ ಆಧಾರದ ಮೇಲೆ ವರ್ಗಾವಣೆಗೆ ಕೇಳಿದ್ದಾರೋ ಗೊತ್ತಿಲ್ಲ. ಇವತ್ತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Mon, 9 June 25