ಬೆಂಗಳೂರು: ಹೆಚ್ಚಿದ ಡ್ರಂಕ್ ಆ್ಯಂಡ್ ಡ್ರೈವ್, ವ್ಹೀಲಿಂಗ್; 6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

| Updated By: Ganapathi Sharma

Updated on: Jul 31, 2024 | 9:20 AM

ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ತಪ್ಪೆಸಗುವವರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಪರಿಣಾಮವಾಗಿ ಈ ವರ್ಷ ಮದ್ಯಪಾನ ಮಾಡಿ ವಾಹನ ಚಾಲನೆ, ವ್ಹೀಲಿಂಗ್ ಸಂಬಂಧ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ಹೆಚ್ಚಿದ ಡ್ರಂಕ್ ಆ್ಯಂಡ್ ಡ್ರೈವ್, ವ್ಹೀಲಿಂಗ್; 6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಹೆಚ್ಚಿದ ಡ್ರಂಕ್ ಆ್ಯಂಡ್ ಡ್ರೈವ್, ವ್ಹೀಲಿಂಗ್; 6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
Follow us on

ಬೆಂಗಳೂರು, ಜುಲೈ 31: ಬೆಂಗಳೂರಿನಲ್ಲಿ ಅಪಾಯಕಾರಿ ಚಾಲನೆಗೆ ಕಡಿವಾಣ ಹಾಕುವುದಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು ಜೂನ್ ಅಂತ್ಯದವರೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 6,283 ಪ್ರಕರಣ ಮತ್ತು ವ್ಹೀಲಿಂಗ್​​​ ಸಂಬಂಧ 225 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ನಗರದಲ್ಲಿ 216 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಜೂನ್​​ನಲ್ಲಾಗಲೇ ಅದನ್ನು ಮೀರಿ ಪ್ರಕರಣಗಳು ದಾಖಲಾಗಿವೆ. ಟ್ರಾಫಿಕ್ ಪೊಲೀಸರು 93 ಸವಾರರ ನೋಂದಣಿ ಪ್ರಮಾಣಪತ್ರಗಳನ್ನು (ಆರ್‌ಸಿ) ಅಮಾನತಿಗಾಗಿ ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಿದ್ದು, ಅದರಲ್ಲಿ 26 ಆರ್​​ಸಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ವ್ಹೀಲಿಂಗ್ ನಡೆಸಿದ ಒಂಬತ್ತು ಚಾಲಕರ ಚಾಲನಾ ಪರವಾನಗಿಯನ್ನು (ಡಿಎಲ್) ಸಹ ಅಮಾನತುಗೊಳಿಸಲಾಗಿದೆ.

2023ರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದೆ 7,053 ಪ್ರಕರಣಗಳು ದಾಖಲಾಗಿದ್ದವು. ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆಗಳಿಂದಾಗಿ ಈ ವರ್ಷದ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ಹೇಳಿದ್ದಾರೆ.

ಇದನ್ನೂ ಓದಿ: ವಯನಾಡು ಗುಡ್ಡ ಕುಸಿತದಲ್ಲಿ ಚಾಮರಾಜನಗರ ಮೂಲದ ಇಬ್ಬರು ಸಾವು, ಮತ್ತಿಬ್ಬರು ನಾಪತ್ತೆ

ಪೊಲೀಸರು 1,263 ಡ್ರೈವಿಂಗ್ ಲೈಸೆನ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಮದ್ಯಪಾನ ಮಾಡಿ ಚಾಲನೆ ಪ್ರಕರಣಗಳಲ್ಲಿ ಅಮಾನತುಗೊಳಿಸಲು ಐದು ಆರ್‌ಸಿಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಮಾರಣಾಂತಿಕ ಅಪಘಾತ

ಬೆಂಗಳೂರಿನಲ್ಲಿ ಜೂನ್ 30 ರವರೆಗೆ ಈ ವರ್ಷ 431 ಮಾರಣಾಂತಿಕ ಮತ್ತು 2,015 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿವೆ. 258 ಚಾಲಕರ ಆರ್​​ಸಿಯನ್ನು ಅಮಾನತಿಗೆ ಕಳುಹಿಸಲಾಗಿದೆ ಮತ್ತು ಈ ವರ್ಷ ಮಾರಣಾಂತಿಕ ಅಪಘಾತಗಳಿಗೆ ಕಾರಣವಾದ 95 ಮಂದಿಯ ಆರ್​​ಸಿಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ