ಮಹಿಳೆಯನ್ನು ಕಾಪಾಡಲು ಹೋಗಿ ಇಬ್ಬರು ಭೀಮಾ ನದಿಪಾಲು
ಕಲಬುರಗಿಯ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಬಳಿಯ ಅಫಜಲಪುರ-ದೇವಣಗಾಂವ್ ಬ್ರೀಡ್ಜ್ನಿಂದ ಭೀಮಾ ನದಿಗೆ ಹಾರಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಹೋಗಿ ಇಬ್ಬರು ನದಿ ಪಾಲಾಗಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ, ಜುಲೈ 31: ಭೀಮಾ ನದಿಗೆ (Bhima River) ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು (Woman) ಕಾಪಾಡಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಕಲಬುರಗಿಯ (Kalaburagi) ಆಲಮೇಲ ತಾಲೂಕಿನ ದೇವಣಗಾಂವ್ ಬಳಿಯ ಅಫಜಲಪುರ-ದೇವಣಗಾಂವ್ ಬ್ರೀಡ್ಜ್ ಬಳಿ ನಡೆದಿದೆ. ಶಿವು ಹಾಗೂ ರಾಜು ಮೃತ ದುರ್ದೈವಿಗಳು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೃತ ಶಿವು ಪತ್ನಿ ಲಕ್ಷ್ಮಿ ಮಂಗಳವಾರ ಸಂಜೆ ಅಫಜಲಪುರ-ದೇವಣಗಾಂವ್ ಬ್ರೀಡ್ಜ್ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಕ್ಷ್ಮಿಯನ್ನು ಉಳಿಸಲು ಪತಿ ಶಿವು ಹಾಗು ಆತನ ಸಂಬಂಧಿ ನದಿಗೆ ಹಾರಿದ್ದಾರೆ.
ಕೂಡಲೆ ಮೀನುಗಾರರು ನದಿಗೆ ಹಾರಿದ್ದು, ಲಕ್ಷ್ಮಿಯನ್ನು ಕಾಪಾಡಿದ್ದಾರೆ. ಆದರೆ, ಲಕ್ಷ್ಮಿ ಪತಿ ಶಿವು ಮತ್ತು ಆತನ ಸಂಬಂಧಿ ಭೀಮಾ ನದಿ ಪಾಲಾಗಿದ್ದಾರೆ. ಭೀಮಾ ನದಿಯಲ್ಲಿ ಮೃತ ಶಿವು ಹಾಗೂ ರಾಜು ಮುಳುಗುವ ದೃಶ್ಯ ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವಿಚಾರ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಅಫಜಲಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸತತ ಕಾರ್ಯಾಚರಣೆ ನಡೆಸಿ, ಶಿವು ಮತ್ತು ರಾಜುವಿನ ಮೃತದೇಹಗಳು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ್ ಬ್ರಿಡ್ಜ್ ಬಳಿ ಪತ್ತೆ ಹಚ್ಚಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಹಿಳೆಯ ಬರ್ಬರ ಹತ್ಯೆ ಕೇಸ್ ಭೇಧಿಸಿದ ಖಾಕಿ ಪಡೆ! ಹಂತಕ ಸಿಕ್ಕಿಬಿದ್ದಿದ್ದೇಗೆ?
ಹಳ್ಳದಲ್ಲಿ ಕೊಚ್ಚಿಕೊಂಡು ಹೋಗ್ತಿದ್ದವನ ರಕ್ಷಣೆ
ಬೆಳಗಾವಿ: ಖಾನಾಪುರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರಿವ ಹಿನ್ನೆಲೆಯಲ್ಲಿ ಖಾನಾಪುರ-ಹೆಮ್ಮಡಗಾ ಮಧ್ಯದಲ್ಲಿರುವ ಹಾಲತ್ರಿ ಹಳ್ಳ ಉಕ್ಕಿ ಹರಿಯುತ್ತಿದೆ. ಹಾಲತ್ರಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ವಿನಾಯಕ ಜಾಧವ್ (38) ಎಂಬಾತನನ್ನು ರಕ್ಷೆಣೆ ಮಾಡಲಾಗಿದೆ.
ಬೆಳಗಾವಿಯ ಶಹಪುರದ ನಿವಾಸಿ ವಿನಾಯಕ ಗೋವಾದಿಂದ ಹೆಮ್ಮಡಗಾ ಮಾರ್ಗವಾಗಿ ಬೆಳಗಾವಿಗೆ ಬರುತ್ತಿದ್ದನು. ವಿನಾಯಕ ಬೈಕ್ ಮೇಲೆ ಹಾಲಾತ್ರಿ ಹಳ್ಳ ದಾಟುವ ಸಾಹಸ ಮಾಡಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ 100 ಮೀಟರ್ ಹಳ್ಳದಲ್ಲಿ ವಿನಾಯಕ ಕೊಚ್ಚಿ ಹೋಗಿದ್ದಾನೆ. ಬಳಿಕ ಹಳ್ಳದ ದಡದಲ್ಲಿನ ಗಿಡ ಹಿಡಿದುಕೊಂಡು ಸಹಾಯಕ್ಕಾಗಿ ಕೂಗಾಡಿದ್ದಾನೆ.
ವಿನಾಯಕನ ಕೂಗಾಟ ಕೇಳಿ ವಿನಾಯಕ ಮುತಗೇಕರ್ ಹಾಗೂ ವಿನೋದ್ ಪಾಟೀಲ್ ಎಂಬುವರು ಕೂಡಲೆ ಸ್ಥಳಕ್ಕೆ ಧಾವಿಸಿ ಹಗ್ಗ ಕೊಟ್ಟು ರಕ್ಷಣೆ ಮಾಡಿದ್ದಾರೆ. ಬೈಕ್ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ವಿನಾಯಕ್ ಬಚಾವ್ ಆಗಿದ್ದಾನೆ. ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ವಿನಾಯಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ