ಬೆಂಗಳೂರು, ಡಿ.23: ರಾಜ್ಯದಲ್ಲಿ ಇಂದು 104 ಜನರಿಗೆ ಕೊರೊನಾ ಸೋಂಕು (Corona virus) ದೃಢಪಟ್ಟಿದ್ದು, ಅದರಲ್ಲಿ ಬೆಂಗಳೂರಿ (Bengaluru)ನಲ್ಲಿಯೇ ಬರೊಬ್ಬರಿ 85 ಜನರಿಗೆ ಕೊರೊನಾ ಸೋಂಕು ಹರಡಿದೆ. ಈ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಯಲ್ಲಿ 8 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿನ್ನಲೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 5.93ರಷ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ರೂಪಾಂತರ ತಳಿ ಜೆಎನ್.1 ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ಕೇರಳದ ಗಡಿಯಲ್ಲಿ ಎಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುತ್ತಿದ್ದು, ಕೆಮ್ಮು, ನೆಗಡಿ, ಜ್ವರ ಇರುವವರಿಗೆ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಅಗತ್ಯ ಇದ್ದವರಿಗೆ ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೊನಾ: ಆಸ್ಪತ್ರೆಗಳಲ್ಲಿ ಸರ್ವ ಸಿದ್ಧ
ಕೊರೊನಾ ಹಾಟ್ಸ್ಪಾಟ್ ಆಗುತ್ತಿರುವ ಬೆಂಗಳೂರಿನ ವಾಣಿ ವಿಲಾಸ, ವಿಕ್ಟೋರಿಯಾ, ಮಿಂಟೋ ಆಸ್ಪತ್ರೆಗಳಲ್ಲಿ ಈಗಾಗಲೇ ಕೊರೊನಾ ಮುನ್ನೇಚರಿಕೆ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿನಿತ್ಯ ಆಸ್ಪತ್ರೆ ಕ್ಯಾಂಪಸ್ನಲ್ಲಿ ಸಿಬ್ಬಂದಿಗಳು RT-PCR ಟೆಸ್ಟ್ ಮಾಡುತ್ತಿದ್ದಾರೆ. ಕೊವಿಡ್ ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪುರುಷರು, ಮಹಿಳೆಯರು, ಮಕ್ಕಳಿಗೆ ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡಲಾಗಿದೆ. ಐಸಿಯುನಲ್ಲಿ 6 ಬೆಡ್ಗಳನ್ನು ಇರಿಸಲಾಗಿದೆ. ಜೊತೆಗೆ ಚಿಕಿತ್ಸೆ ನೀಡಲು ನರ್ಸ್, ವೈದ್ಯರು, ಟೆಕ್ನಷಿಯನ್ಸ್ಗಳನ್ನು ಆಸ್ಪತ್ರೆ ಹೊಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Sat, 23 December 23