ಮತ್ತೆ ರಣಕಹಳೆ ಊದಿದ ಪಂಚಮಸಾಲಿ ಸಮುದಾಯ, ಇವತ್ತಿನಿಂದ್ಲೇ ‘ಪಂಚಮಸಾಲಿ’ ಹೋರಾಟ ಶುರು

| Updated By: ಆಯೇಷಾ ಬಾನು

Updated on: Aug 26, 2021 | 7:26 AM

2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಪ್ರತಿಭಟನೆ ಮಾಡಿತ್ತು. ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ನಡೆಸಿದ್ರು. ದೊಡ್ಡ ಮಟ್ಟದಲ್ಲಿ ಸಮಾವೇಶ ಕೂಡ ಮಾಡಿದ್ರು. ಬಿ.ಎಸ್.ಯಡಿಯೂರಪ್ಪ ಸರ್ಕಾರ ಮೀಸಲಾತಿ ಕುರಿತು ಕೆಲ ಭರವಸೆ ಕೊಟ್ಟಿತ್ತು. ಆ ಭರವಸೆ ಇನ್ನೂ ಈಡೇರಿಲ್ಲ. ಇದೇ ಕಾರಣಕ್ಕೆ ಮತ್ತೆ ಪಂಚಮಸಾಲಿ ಸಮುದಾಯ ಮತ್ತೆ ಹೋರಾಟಕ್ಕೆ ಇಳಿದಿದೆ. ಇವತ್ತಿನಿಂದ್ಲೇ ಹೋರಾಟ ಶುರು ಮಾಡ್ತಿದೆ.

ಮತ್ತೆ ರಣಕಹಳೆ ಊದಿದ ಪಂಚಮಸಾಲಿ ಸಮುದಾಯ, ಇವತ್ತಿನಿಂದ್ಲೇ ‘ಪಂಚಮಸಾಲಿ’ ಹೋರಾಟ ಶುರು
ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ ಪ್ರತಿಭಟನೆ
Follow us on

ಬೆಂಗಳೂರು: ಸೆಪ್ಟಂಬರ್ 13 ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗ್ತಿದೆ. ಇದರ ಬೆನ್ನಲ್ಲೇ ಮತ್ತೆ ಮೀಸಲಾತಿ ಕಿಚ್ಚು ಹೊತ್ತಿಕೊಳ್ಳೋ ಸಾಧ್ಯತೆ ಇದೆ. ಯಾಕೆಂದ್ರೆ, ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ(2A Reservation Row )ಮತ್ತೆ ರಣಕಹಳೆ ಊದಿದೆ. ಇದ್ರಿಂದ ಬಸವರಾಜ ಬೊಮ್ಮಾಯಿ(Basavaraj Bommai) ಸರ್ಕಾರಕ್ಕೆ ಮೀಸಲಾತಿ ಸವಾಲ್ ಎದುರಾಗಿದೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡ್ಬೇಕು ಅಂತಾ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇವತ್ತಿನಿಂದ ಮತ್ತೆ ಮೀಸಲಾತಿ ಹೋರಾಟ ಶುರುವಾಗಲಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಇವತ್ತು ಬೆಳಗ್ಗೆ 10.30ಕ್ಕೆ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಒಂದು ತಿಂಗಳು ರಾಜ್ಯದಾದ್ಯಂತ ಸಂಚಾರ ಮಾಡಲಿರುವ ಈ ಅಭಿಯಾನ ಪಂಚಮಸಾಲಿ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಿದೆ. ವಾಹನಗಳಲ್ಲಿ ಸಂಚಾರ ಮಾಡಲಿರುವ ಈ ಅಭಿಯಾನ ರಾಜ್ಯದ 175 ತಾಲೂಕು ಕೇಂದ್ರಗಳಿಗೂ ಭೇಟಿ ನೀಡಿ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದೆ.

ಇನ್ನು, ಗೌಡ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಬೇಕು ಅಂತಾ ಹೋರಾಟವನ್ನ ವಿಸ್ತರಿಸಲಾಗಿದ್ದು, ಮೀಸಲಾತಿ ಕಿಚ್ಚು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಲಿಂಗಾಯತರಿಗೂ 2ಎ ಮೀಸಲಾತಿ ನೀಡಬೇಕೆಂದು ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಈ ಹೋರಾಟಕ್ಕೆ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ಅರವಿಂದ್ ಬೆಲ್ಲದ್, ಮಾಜಿ ಶಾಸಕರಾದ ವಿಜಯಾನಂದ್ ಕಾಶಪ್ಪನವರ್, ಶಿವಶಂಕರ್ ಸಾಥ್ ನೀಡಲಿದ್ದಾರೆ. ಇಷ್ಟೇ ಅಲ್ಲ, ಮೊನ್ನೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿರುವ ಮಾಜಿ ಶಾಸಕ ವಿನಯ್ ಕುಲಕರ್ಣಿ ಕೂಡ ಪಂಚಮಸಾಲಿ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ಇತ್ತ, ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಕಹಳೆ ಮೊಳಗಿಸಿದ್ರೆ, ದೆಹಲಿಗೆ ಹೋಗಿರೋ ಬಸವರಾಜ ಬೊಮ್ಮಾಯಿ ಕೂಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಮೀಸಲಾತಿಗಾಗಿ ವಿವಿಧ ಸಮುದಾಯಗಳಿಂದ ಹೋರಾಟ ನಡೆಸಲಿ ಸಿದ್ಧತೆ ಆಗಿದೆ. ಮೀಸಲಾತಿ ಸಂಬಂಧ ಕೆಲ ಮಠಾಧೀಶರು ಭೇಟಿಯಾಗಿದ್ದಾರೆ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ನಡೆಯಲಿದೆ ಅಂದ್ರು. ಅಲ್ದೆ, ಜಯ ಮೃತ್ಯುಂಜಯ ಶ್ರೀ ಹೇಳಿಕೆಗೆ ಪ್ರತಿಕ್ರಿಯೆ ಕೊಡೋಕೆ ಆಗಲ್ಲ ಅಂತೇಳಿದ್ರು..

ಒಟ್ಟಿನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಹೋರಾಟ ಜೋರಾಗಿತ್ತು. ಇದೀಗ ಮತ್ತೆ ಮೀಸಲಾತಿಗಾಗಿ ಪಂಚಮಸಾಲಿಗಳು ನಡೆಸಲಿರುವ ಹೋರಾಟದ ಬಿಸಿ ಬೊಮ್ಮಾಯಿ ಸರ್ಕಾರಕ್ಕೆ ತಟ್ಟಲಿದೆ. ಅಲ್ಲದೇ ಅಧಿವೇಶನದ ವೇಳೆ ಸರ್ಕಾರಕ್ಕೆ ತಲೆನೋವಾಗಿ ಕಾಡೋದಂತೂ ಗ್ಯಾರಂಟಿ.

ಇದನ್ನೂ ಓದಿ: Gokulashtami 2021: ಶ್ರೀ ಕೃಷ್ಣನ ಕೃಪೆ ನಿಮ್ಮ ಮೇಲಿರಬೇಕು ಅಂದರೆ ಗೋಕುಲಾಷ್ಟಮಿ ಸಂದರ್ಭ ಈ 10 ವಿಷಯ ತಿಳಿದುಕೊಳ್ಳಿ