ಬೆಂಗಳೂರು, ಫೆಬ್ರವರಿ 19: ಕೇಂದ್ರ ಸರ್ಕಾರವು ಹೊಸದಾಗಿ ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ ಬೆಂಗಳೂರಿಗೆ 7,000 ಎಲೆಕ್ಟ್ರಿಕ್ ಬಸ್‌ಗಳನ್ನು ಅನುಮೋದಿಸಿದೆ. ಇದರಿಂದಾಗಿ, ಬೆಂಗಳೂರು ಶೀಘ್ರದಲ್ಲೇ ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಖ್ಯೆಯಲ್ಲಿ ದೆಹಲಿಯನ್ನು ಮೀರಿಸುವ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿಯಲ್ಲಿ, ಬೆಂಗಳೂರಿಗೆ 7,000 ಇ-ಬಸ್‌ಗಳು ಸಿಗಲಿದ್ದು, ಹೈದರಾಬಾದ್‌ಗೆ 2,800 ಇ-ಬಸ್‌ಗಳು ಸಿಗಲಿವೆ ಎಂದು ವರದಿಯಾಗಿದೆ.
ಪ್ರಸ್ತುತ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸುಮಾರು 1,300 ಎಸಿ ಅಲ್ಲದ ಇ-ವಾಹನಗಳು ಸೇರಿದಂತೆ 6,500 ಬಸ್‌ಗಳನ್ನು ಹೊಂದಿದೆ. ಶೀಘ್ರದಲ್ಲೇ 320 ಎಸಿ ಇ-ಬಸ್‌ಗಳನ್ನು ಗುತ್ತಿಗೆಗೆ ಪಡೆಯಲಿದೆ.
ಸದ್ಯ, 8,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿರುವ ದೆಹಲಿಯು ದೇಶದ ಎಲ್ಲಾ ನಗರಗಳ ಪೈಕಿ ಅತಿ ಹೆಚ್ಚು ಸಾರ್ವಜನಿಕರ ಸಾರಿಗೆ ಬಸ್‌ಗಳನ್ನು ಹೊಂದಿದೆ. ಆದರೆ, ಬೆಂಗಳೂರಿಗೆ ಕೇಂದ್ರದಿಂದ ಬರಲಿರುವ ಬಸ್‌ಗಳು ಹಾಗೂ ಬಿಎಂಟಿಸಿ ಖರೀದಿಸಲಿರುವ ಬಸ್‌ಗಳ ಲೆಕ್ಕಾಚಾರ ಹಾಕಿದಾಗ, ಮುಂದಿನ 2-3 ವರ್ಷಗಳಲ್ಲಿ ದೆಹಲಿಯನ್ನು ಮೀರಿಸಲಿದೆ.
ಬೆಂಗಳೂರಿನ ಸಾರ್ವಜನಿಕ ಸಾರಿಗೆ ಅವಶ್ಯಕತೆಗಳನ್ನು ಗಮನಿಸಿದರೆ, ಬಿಎಂಟಿಸಿಗೆ 10,000 ರಿಂದ 12,000 ಬಸ್‌ಗಳು ಬೇಕಾಗುತ್ತವೆ ಎಂದು ನೀತಿ ನಿರೂಪಕರು ಮತ್ತು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯಡಿ ಮೂರು ವರ್ಷಗಳ ಅವಧಿಯಲ್ಲಿ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಆದಾಗ್ಯೂ, ಈ ಅವಧಿಯಲ್ಲಿ, ಹಲವು ಹಳೆಯ ಬಸ್‌ಗಳನ್ನು ಗುಜರಿಗೆ ಹಾಕಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಎಂಟಿಸಿ ನಿಯಮಗಳ ಪ್ರಕಾರ, 11 ಲಕ್ಷ ಕಿಲೋಮೀಟರ್ ಸಂಚರಿಸಿದ ಅಥವಾ 15 ವರ್ಷ ಪೂರೈಸಿದ ಬಸ್ ಅನ್ನು ಸ್ಕ್ರಾಪ್ ಮಾಡಬೇಕು. ಬಿಎಂಟಿಸಿಯ ಸರಿಸುಮಾರು ಶೇ 10 ರಷ್ಟು ಬಸ್ಸುಗಳು ವಾರ್ಷಿಕವಾಗಿ ಸೇವೆಯಿಂದ ಬಿಡುಗಡೆ ಹೊಂದುತ್ತವೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಸರ್ಕಾರಿ ವಾಹನ ಬಿಟ್ಟು ಹೊಸ ಐಷಾರಾಮಿ ಕಾರು ಹತ್ತಿಬಂದ ಸಿಎಂ: ಈ ಕಾರಿನ ವಿಶೇಷತೆ, ಬೆಲೆ ಎಷ್ಟು ಗೊತ್ತಾ?
ಮುಂದಿನ ಮೂರು ವರ್ಷಗಳಲ್ಲಿ, ಬಿಎಂಟಿಸಿಯ 2,000 ಬಸ್‌ಗಳು ಗುಜರಿಗೆ ಹೋದರೂ ಸಹ ಕೇಂದ್ರದಿಂದ ದೊರೆಯುವ 7000 ಬಸ್‌ಗಳು ಸೇರಿದರೆ ಒಟ್ಟು ಬಸ್‌ಗಳ ಸಂಖ್ಯೆ 10,000 ದಾಟುತ್ತದೆ.
ಬೃಹತ್ ಕೈಗಾರಿಕಾ ಸಚಿವಾಲಯವು 2024 ರ ಸೆಪ್ಟೆಂಬರ್ 29 ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಪಿಎಂ ಇ-ಡ್ರೈವ್ ಯೋಜನೆಯಡಿ 40 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಒಂಬತ್ತು ದೊಡ್ಡ ನಗರಗಳಲ್ಲಿ 14,028 ಇ-ಬಸ್‌ಗಳ ಖರೀದಿಗೆ 4,391 ಕೋಟಿ ರೂ. ಸಬ್ಸಿಡಿಗಳನ್ನು ಒದಗಿಸಬೇಕಿದೆ. 2025-26ರ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ 4,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು.