AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಡಾಕ್ಟ್ರೇ: ವೈದ್ಯನಿಗೆ ಸೊಸೆ ಸಂದೇಶ

ಮಹಿಳೆಯೊಬ್ಬರು ತನ್ನ ಅತ್ತೆಯನ್ನು ಕೊಲ್ಲಲು ಮಾತ್ರೆಗಳ ಬಗ್ಗೆ ಹೇಳಿ ಅಂತ ಬೆಂಗಳೂರಿನ ವೈದ್ಯರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯಿಂದ ವೈದ್ಯರು ಆಘಾತಕ್ಕೊಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮಹಿಳೆ ಮೆಸೆಜ್​ ಡಿಲೀಟ್​ ಮಾಡಿ, ವೈದ್ಯರ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ವೈದ್ಯರು ಸಾಮಾಜಿಕ ಮತ್ತು ರಾಜಕೀಯವಾಗಿ ಸಕ್ರಿಯರಾಗಿದ್ದು, ಇದು ಷಡ್ಯಂತ್ರವೂ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಡಾಕ್ಟ್ರೇ: ವೈದ್ಯನಿಗೆ ಸೊಸೆ ಸಂದೇಶ
ವೈದ್ಯನಿಗೆ ಮಹಿಳೆ ಸಂದೇಶ
Jagadisha B
| Edited By: |

Updated on:Feb 19, 2025 | 10:42 AM

Share

ಬೆಂಗಳೂರು, ಫೆಬ್ರವರಿ 19: ಮಹಿಳೆಯೋರ್ವರ ವಾಟ್ಸಾಪ್​ ಸಂದೇಶ ಕಂಡು ಬೆಂಗಳೂರಿನ (Bengaluru) ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹೌದು, ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ಸೊಸೆ ವೈದ್ಯರಿಗೆ ವಾಟ್ಸಾಪ್​​ ಸಂದೇಶ ಕಳುಹಿಸಿದ್ದಾಳೆ. ಮಹಿಳೆಯ ಸಂದೇಶ ಕಂಡು ವೈದ್ಯರು ಅಚ್ಚರಿಗೊಂಡಿದ್ದಾರೆ. ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್​ ಕುಮಾರ್​ ಅವರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್​ಸ್ಟಾಗ್ರಾಮ್​ ಮೂಲಕ ಡಾ. ಸುನಿಲ್​ ಕುಮಾರ್​ರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಸೋಮವಾರ (ಫೆಬ್ರವರಿ 17) ರಂದು ಮಹಿಳೆ, ಡಾ. ಸುನಿಲ್​ ಕುಮಾರಿಗೆ ವಾಟ್ಸಾಪ್​ನಲ್ಲಿ ಸಂದೇಶ ಕಳುಹಿಸಿದ್ದಾಳೆ.

ಮಹಿಳೆ: ವಿಚಾರ ಹೇಳಿದ್ರೆ ಬೈತೀರಾ ಅನಿಸುತ್ತೆ

ವೈದ್ಯ: ಹೇಳಿ

ಮಹಿಳೆ: ಭಯ ಆಗ್ತಾ ಇದೆ ಹೇಳಕ್ಕೆ

ವೈದ್ಯ: ಹೇಳಿ

ಮಹಿಳೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ

ವೈದ್ಯ: ಯಾರನ್ನ?

ಮಹಿಳೆ: ಅತ್ತೆನ

ವೈದ್ಯ: ಯಾಕೆ

ಮಹಿಳೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್​ ಹೇಳಿ. ತುಂಬಾ ಏಜ್​ ಆಗಿದೆ.

ವೈದ್ಯ: ನಾವು ಪ್ರಾಣ ಉಳಿಸೋ ಜನ

ಮಹಿಳೆ: ಟ್ಯಾಬ್ಲೆಟ್​ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ”

ಈ ರೀತಿಯಾಗಿ ಮಹಿಳೆ ಮತ್ತು ವೈದ್ಯರ ನಡುವೆ ಸಂಭಾಷಣೆ ನಡೆದಿದೆ. ಸೊಸೆ ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದಾರೆ. ಆ ಬಳಿಕ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ. ಮಹಿಳೆಯ ಸಂದೇಶ ಓದಿ ಶಾಕ್ ಆದ ವೈದ್ಯ ಸುನಿಲ್​ ಕುಮಾರ್​ ಸಂಜಯ್ ನಗರ ಪೊಲೀಸ್​ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ವೈದ್ಯ ಸುನಿಲ್​ ಕುಮಾರ್ ಟಿವಿ9 ಜೊತೆ ಮಾತನಾಡಿ, “ಸಹನಾ ಎಂಬುವರು ನನಗೆ 17ನೇ ತಾರೀಖು ಮೆಸೇಜ್ ಮಾಡಿದ್ದರು. ಕನ್ನಡದಲ್ಲಿ ಸಂದೇಶ ಕಳುಹಿಸಿ ಮಾತು ಆರಂಭಿಸಿದರು. ನೀವು ನನಗೆ ಬೈಯುವುದಿಲ್ಲ ಎಂದರೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ ಎಂದರು. ಬಳಿಕ ಅತ್ತೆ ತುಂಬ ಕಿರುಕುಳ ನೀಡುತಿದ್ದಾರೆ. ಅವರನ್ನು ಸಾಯಿಸಲು ಎರಡು ಮಾತ್ರೆ ಕೊಡಿ ಎಂದರು. ಅದಾದ ಬಳಿಕ ನಾನು ಪ್ರಶ್ನೆ ಮಾಡಿದೆ. ಬಳಿಕ ಎಲ್ಲ ಸಂದೇಶಗಳನ್ನು ಡಿಲೀಟ್ ಮಾಡಿದರು. ಡಿಲೀಟ್ ಆಗುವ ಮೊದಲೇ ನಾನು ಸ್ಕ್ರೀನ್​ಶಾಟ್ ತೆಗೆದುಕೊಂಡಿದ್ದೆ. ಬಳಿಕ ನಾನು ಸಂಜಯನಗರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದೇನೆ” ಎಂದು ಹೇಳಿದರು.

“ಆ ಬಳಿಕ ಮಹಿಳೆ ನನಗೆ (ಸುನಿಲ್​ ಕುಮಾರ್​) ಕರೆ ಮಾಡಿ ನನ್ನ ಕ್ಷಮಿಸಿಬಿಡಿ ಎಂದು ಕೇಳಿಕೊಂಡರು. ಆದರೆ ನನಗೆ ಅನುಮಾನ ಇದೆ. ಇದು ನಿಜವಾಗಲೂ ಮಹಿಳೆ ಸಂದೇಶ ಮಾಡಿರಬಹುದು. ಅಥವಾ ಯಾರಾದರೂ ನನ್ನ ವಿರುದ್ಧ ಷಡ್ಯಂತರ ಮಾಡಿ ಟ್ರ್ಯಾಪ್​ ಮಾಡಿರಬಹುದು. ನಾನು ರಾಜಕೀಯ ಹಾಗೂ ಸಾಮಾಜಿಕವಾಗಿ ಸಕ್ರಿಯನಾಗಿದ್ದೇನೆ. ಸಮಾಜಿಕ ಜಾಲತಾಣದ ಮೂಲಕ ಸಹ ನಾನು ಪ್ರಚಾರವಾಗಿದ್ದೇನೆ. ಈ ಹಿಂದೆ ವಿಜಯಪುರದಲ್ಲಿ ಎಂಎಲ್​ಎ ಚುನಾವಣೆಗೆ ಸಹ ಸ್ಪರ್ಧಿಸಿದ್ದೆ. ಯಾರು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ, ಆದರೆ ಈ ಹಿಂದೆ ವ್ಯಕ್ತಿಯೋರ್ವ ಸಹ ಇದೇ ರೀತಿ ಕರೆ ಮಾಡಿದ್ದನು” ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 am, Wed, 19 February 25