ಬೆಂಗಳೂರು: ಫೆಬ್ರವರಿ ಉಷ್ಣಾಂಶ 20 ವರ್ಷಗಳಲ್ಲೇ ಗರಿಷ್ಠ
ಬೆಂಗಳೂರು ನಗರವು ಫೆಬ್ರವರಿ ತಿಂಗಳಲ್ಲಿ 20 ವರ್ಷಗಳ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಫೆಬ್ರವರಿ 17ರಂದು 35.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 2005ರ ದಾಖಲೆಯನ್ನು ಸರಿಗಟ್ಟಿದೆ. ಹಗಲು ವೇಳೆಯಲ್ಲಿ ದೆಹಲಿಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು, ಫೆಬ್ರವರಿ 19: ಬೆಂಗಳೂರು ನಗರವು ಫೆಬ್ರವರಿ ತಿಂಗಳಲ್ಲಿ 20 ವರ್ಷಗಳ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಿದೆ. ಫೆಬ್ರವರಿ 17 ರಂದು ನಗರದಲ್ಲಿ ತೀವ್ರವಾದ ಉಷ್ಣಾಂಶ ದಾಖಲಾಯಿತು. ಆ ದಿನ ಗರಿಷ್ಠ ಉಷ್ಣಾಂಶ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿ 20 ವರ್ಷಗಳ ದಾಖಲೆ ಸರಿಗಟ್ಟಿತು. ಇದು 2005 ರಲ್ಲಿ ಫೆಬ್ರವರಿ 17 ರಂದು ದಾಖಲಾದ ನಗರದ ಅತಿ ಹೆಚ್ಚು ಫೆಬ್ರವರಿ ತಾಪಮಾನಕ್ಕೆ ಸಮನಾಗಿತ್ತು. ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಪ್ರಕಾರ, ಈ ವರ್ಷ ಬೇಸಿಗೆಯಲ್ಲಿ ಇನ್ನಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ.
ದೆಹಲಿಗಿಂತಲೂ ಹೆಚ್ಚಿನ ಗರಿಷ್ಠ ಉಷ್ಣಾಂಶ
ಫೆಬ್ರವರಿ 17 ರಂದು ಬೆಂಗಳೂರಿನ ಗರಿಷ್ಠ ತಾಪಮಾನ ದೆಹಲಿಗಿಂತಲೂ ಹೆಚ್ಚಾಗಿತ್ತು. ನಗರದ ತಾಪಮಾನ ಕಳೆದ ವರ್ಷಕ್ಕಿಂತಸುಮಾರು 2.7 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಿದೆ. ಇದು ಗಮನಾರ್ಹ ಹವಾಮಾನ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಐಎಂಡಿ ಹೇಳಿದೆ. ಬೆಂಗಳೂರಿನ ಗರಿಷ್ಠ ತಾಪಮಾನ 35.9 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ದೆಹಲಿಯ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಸಾಮಾನ್ಯವಾಗಿ ಉತ್ತರ ಭಾರತದ ನಗರಗಳಲ್ಲಿ ಉಷ್ಣಾಂಶ ಹೆಚ್ಚು ಎಂಬ ಸಾಮಾನ್ಯ ಗ್ರಹಿಕೆಯನ್ನು ಈ ಬಾರಿ ಬೆಂಗಳೂರಿನ ಗರಿಷ್ಠ ತಾಪಮಾನ ತಲೆಕೆಳಗು ಮಾಡಿದೆ.
ಸದ್ಯದ ಮಟ್ಟಿಗೆ, ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮಂಜು ಮುಸುಕಿದ ವಾತಾವರಣದ ಜತೆಗೆ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ ಹಗಲು ಹೊತ್ತಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮುನ್ಸೂಚನೆ ನೀಡಲಾಗಿದೆ.
ಬೇಸಿಗೆ ಆರಂಭದ ಸುಳಿವು ಎಂದ ಐಎಂಡಿ
ಸಾಮಾನ್ಯವಾಗಿ ಮಾರ್ಚ್ ಆರಂಭದಲ್ಲಿ ಬೇಸಿಗೆ ಪ್ರಾರಂಭವಾಗುತ್ತದೆ. ಆದರೆ ಈ ವರ್ಷ, ಫೆಬ್ರವರಿ ಮಧ್ಯದ ವೇಳೆಗೆ ಬೇಸಿಗೆ ಆರಂಭವಾಗುತ್ತಿರುವುದರ ಸೂಚಕವಾಗಿ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಐಎಂಡಿ ಹೇಳಿದೆ. ಫೆಬ್ರವರಿ 18 ರಂದು, ನಗರದಲ್ಲಿ ಗರಿಷ್ಠ 32.8 ° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ವಾಡಿಕೆಗಿಂತ 1.4 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕನಿಷ್ಠ 17.8 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿತ್ತು. ಇದೂ ಸಹ ವಾಡಿಕೆಗಿಂತ 0.1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಈ ವರ್ಷ ಬೆಂಗಳೂರಿನಲ್ಲಿ ತಾಪಮಾನವು ದಾಖಲೆ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಫೆಬ್ರವರಿಯಲ್ಲೇ ಬಿಸಿಲಿನ ಝಳಕ್ಕೆ ತತ್ತರಿಸುತ್ತಿದೆ ಬೆಂಗಳೂರು: ಗರಿಷ್ಠ ಉಷ್ಣಾಂಶ ದೆಹಲಿಗಿಂತಲೂ ಹೆಚ್ಚು
ಒಂದೆಡೆ, ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದರೆ ಮತ್ತೊಂದೆಡೆ, ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆರಂಭವಾಗುವ ಲಕ್ಷಣಗಳು ಗೋಚರಿಸಿವೆ. ಹೀಗಾಗಿ ಜಲ ಮಂಡಳಿ ಕಳೆದ ಬಾರಿ ಬೇಸಿಗೆಯಲ್ಲಿ ಹೊರಡಿಸಿದ್ದ ಆದೇಶ ಮರು ಜಾರಿ ಮಾಡಲು ಮುಂದಾಗಿದ್ದು, ಅನಗತ್ಯವಾಗಿ ನೀರು ವ್ಯರ್ಥ ಮಾಡಿದವರಿಗೆ ದಂಡ ವಿಧಿಸುವುದಾಗಿ ಹೇಳಿದೆ.