
ಬೆಂಗಳೂರು, (ಅಕ್ಟೋಬರ್ 10): ಬೆಂಗಳೂರಿನ ರಸ್ತೆ ಗುಂಡಿಗೆ (Pothole) ಮತ್ತೊಂದು ಪ್ರಾಣ ಹೋಗಿದೆ. ಮೊನ್ನೇ ಅಂದರೆ ಸೆಪ್ಟೆಂಬರ್ 29ರಂದು ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ರಕ್ಕಸ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಟಿಪ್ಪರ್ , ಕಾಲೇಜಿಗೆ ತೆರಳುತ್ತಿದ್ದ ಧನುಶ್ರೀ ಎಂಬ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಧನುಶ್ರೀ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಈ ಪ್ರಕರಣ ಮಾಸುವ ಮುನ್ನವೇ ಗುಂಜೂರಿನ ಡೀನ್ಸ್ ಅಕಾಡೆಮಿ ಬಳಿ ಮತ್ತೊಂದು ದುರ್ಘಟನೆ ನಡೆದಿದೆ. ಹೌದು.. ರಸ್ತೆ ಹದಗೆಟ್ಟಿದ್ದರಿಂದ ನಿಯಂತ್ರಣ ತಪ್ಪಿದ ಶಾಲಾ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಸವಾರ ದುರ್ಮರಣ ಹೊಂದಿದ್ದಾನೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ಥಳೀಯ ಬಿಜೆಪಿ ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ನೂತನವಾಗಿ ಜಾರಿಗೆ ಬಂದಿರುವ ಜಿಬಿಎಗೆ ಟ್ವಿಟ್ಟರ್ ಎಕ್ಸ್ ನಲ್ಲಿ ಫೋಟೋ ಟ್ಯಾಗ್ ಮಾಡಿ ಸಿವಿಕ್ ಅಸೋಸಿಯೇಷನ್ ಫೋರಂ ಆಕ್ರೋಶ ಹೊರಹಾಕಿದೆ.
Shame!
This third rate administration in #ITCorridor & #Bengaluru has no end.@CMofKarnataka@MALimbavali @DKShivakumar @osd_cmkarnataka @GBA_office @GBAChiefComm @GBITCIA @0RRCA https://t.co/THd2BB43On— SaveBellandur(ಬೆಳ್ಳಂದೂರು ಉಳಿಸಿ) (@kdevforum) October 10, 2025
ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ರಸ್ತೆ ಗುಂಡಿಗಳದ್ದೇ ಸಮಸ್ಯೆ. ಗುಂಡಿ ಬಿದ್ದ ರಸ್ತೆಗಳ ಕಾರಣದಿಂದಾಗಿ ವಾಹನ ಸವಾರರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಹಾಳಾದ ರಸ್ತೆಗಳಿಂದಾಗಿ ಟ್ರಾಫಿಕ್ ಜಾಮ್, ಧೂಳು ಮತ್ತು ಅಪಘಾತಗಳು ಕೂಡ ಸಂಭವಿಸುತ್ತಿವೆ. ಇನ್ನು ಬೆಂಗಳೂರು ರಸ್ತೆಗಳ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಅಲ್ಲದೇ ಕೆಲ ಸಾಫ್ಟ್ ವೇರ್ ಕಂಪನಿಗಳು ರಸ್ತೆಗಳಿಂದ ಬೇಸತ್ತು ಬೆಂಗಳೂರು ತೊರೆಯುವುದಾಗಿ ಸಹ ಹೇಳಿದ್ದವು.
ಹೀಗೆ ಬೆಂಗಳೂರು ರಸ್ತೆ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳು ಹಾಳಾಗಿವೆಯೋ ಅಲ್ಲಿ ತಾತ್ಕಾಲಿಕವಾಗಿ ಡಾಂಬರು ಹಾಕಿ ಸರಿಪಡಿಸುವಂತೆ ತಾಕೀತು ಮಾಡಿದ್ದರು. ಇಷ್ಟಾದರೂ ಸಹ ಕೆಲ ರಸ್ತೆಗಳಲ್ಲಿ ಹಾಗೇ ಗುಂಡಿಗಳು ಉಳಿದುಕೊಂಡಿವೆ.
Published On - 10:22 pm, Fri, 10 October 25