ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ: ಚಿಕಿತ್ಸೆ ಫಲಿಸದೇ ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ
ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಿಸಿದ್ದು, ಈ ಘಟನೆಯಲ್ಲಿ ಏಳು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಸ್ಥಿತಿ ಸಹ ಚಿಂತಾಜನಕವಾಗಿದೆ. ಹೊಟ್ಟೆಪಾಡಿಗಾಗಿ ದೂರು ರಾಜ್ಯದಿಂದ ಬಂದಿದ್ದವರು ದುರಂತ ಅಂತ್ಯಕಂಡಿದ್ದಾರೆ.

ರಾಮನಗರ, (ಅಕ್ಟೋಬರ್ 10): ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡದಲ್ಲಿ (Fire Incident) ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೊನ್ನೆ ಅಕ್ಟೋಬರ್ 7ರಂದು ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆಯ ರಾಮನಗರ ತಾಲೂಕಿನ ಭೀಮನಹಳ್ಳಿ ಬಳಿ ಶೆಡ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಪಶ್ಚಿಮ ಬಂಗಾಳ ಮೂಲದ 7 ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಈ ಪೈಕಿ ಮೂವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಮನುರುಲ್ ಶೇಖ್, ಜಾವಿದ್ ಅಲಿ ಹಾಗೂ ತಜ್‌ಬುಲ್ ಮೃತರು.
ಮಂಗಳವಾರ (ಅ.7) ಖಾಸಗಿ ಲೇಔಟ್‌ವೊಂದರಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಶೆಡ್ ನಲ್ಲಿ ವಾಸವಾಗಿದ್ದರು. ಆದ್ರೆ, ಗ್ಯಾಸ್ ಲೀಕ್ ಆಗಿ ಈ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 7 ಕಾರ್ಮಿಕರಿಗೆ ಸುಟ್ಟಗಾಯಗಳಾಗಿದ್ದವು. ಕೂಡಲೇ ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಅಕ್ಟೋಬರ್ 10) ಮೂವರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಲಾಡ್ಜ್ಗೆ ಬಂದು ಹೆಣವಾದಳು: ಬೆಂಕಿ ದುರಂತಕ್ಕೆ ಅಸಲಿ ಕಾರಣ ಬಯಲು
ಬೆಂಗಳೂರಿನ ಯಲಹಂಕದ ನ್ಯೂಟೌನ್‌ನಲ್ಲಿರೋ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಇದ್ದ ಲಾಡ್ಜ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಮಹಿಳೆ, ಯುವಕ ಮೃತಪಟ್ಟಿದ್ದಾರೆ. ಮಹಿಳೆ ಮದುವೆಗೆ ನಿರಾಕರಿಸಿದ್ದಕ್ಕೆ ಯುವಕ ರೂಮಿನಲ್ಲೇ ಬೆಂಕಿ ಹಚ್ಚಿಕೊಂಡಿದ್ದಾನೆ. ಇದರಿಂದ ಇಡೀ ಹೋಟೆಲ್ ಗೆ ಹರಡಿದ್ದು, ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.



