ಪ್ರೀತಿಯ ನಾಯಿ ‘ಡಂಬೂ’ ನಾಪತ್ತೆ; ಊಟ-ನೀರು ಬಿಟ್ಟ ಕುಟುಂಬ!
ಸಾಕಿದ ಮುದ್ದಿನ ಶ್ವಾನ ನಾಪತ್ತೆಯಾಗಿದ್ದು, 10 ದಿನಗಳಿಂದ ಹುಡುಕಾಡುತ್ತಿದ್ದರೂ ಸಿಗುತ್ತಿಲ್ಲ. ಮುದ್ದಿನ ಡಂಬೂನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬ ಊಟ-ನೀರು ತ್ಯಜಿಸಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಡಂಬೂ ಬರುವಿಕೆಗಾಗಿ 1 ವರ್ಷದ ಮಗು ಕೂಡ ಬಾಗಿಲು ನೋಡುತ್ತಿದೆ.
ಬೆಂಗಳೂರು, ಮಾ.14: ಪ್ರೀತಿ ಅಂದರೆ ಹಾಗೆ, ಮನುಷ್ಯ ಆಗಿರಲಿ ಅಥವಾ ಪ್ರಾಣಿಯೇ ಆಗಿರಲಿ.. ಒಮ್ಮೆ ಹಚ್ಚಿಕೊಂಡರೆ ಸಾಕು ಬಿಟ್ಟಿರಲು ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ಶ್ವಾನಗಳನ್ನು ಮನೆಮಂದಿ ಹೆಚ್ಚು ಹಚ್ಚಿಕೊಂಡಿರುತ್ತಾರೆ. ಎತ್ತಿಕೊಂಡು, ತಬ್ಬಿಕೊಂಡು, ಆಡಿಸಿ ಮುದ್ದಿಸುತ್ತಾರೆ. ಮನೆ ಸದಸ್ಯರಂತೆ ಸಾಕುತ್ತಾರೆ. ಇಷ್ಟೊಂದು ಪ್ರೀತಿ ಕೊಟ್ಟು ಸಾಕಿದ ಶ್ವಾನ ನಾಪತ್ತೆಯಾದರೆ (Pet Dog Missing) ಅರಗಿಸಿಕೊಳ್ಳುವುದಾದರೂ ಹೇಗೆ? ಇಂತಹದ್ದೇ ಒಂದು ಘಟನೆ ಬೆಂಗಳೂರಿನ ನಿವಾಸಿಯೊಬ್ಬರ ಮನೆಯಲ್ಲಿ ನಡೆದಿದೆ.
ಅಶೋಕ್ ಮತ್ತು ಅಶ್ವಿನಿ ಬೆಂಗಳೂರಿನ ಬಗಲಗುಂಟೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಒಂದು ವರ್ಷ ಗಂಡು ಮಗು ಕೂಡ ಇದೆ. ಈ ಮನೆಯಲ್ಲಿ ಡಂಬೂ ಎಂಬ ಮುದ್ದಿನ ಶ್ವಾನವೂ ಇತ್ತು. ಆದರೆ, ಈಗ ಆ ನಾಯಿ ನಾಪತ್ತೆಯಾಗಿದೆ. ಕಳೆದ 10 ದಿನಗಳಿಂದ ತೀವ್ರ ಹುಡುಕಾಡುತ್ತಿದ್ದರೂ ಡಂಬೂ ಮಾತ್ರ ಸಿಗುತ್ತಿಲ್ಲ. ಇದರಿಂದಾಗಿ ದುಃಖತಪ್ತರಾಗಿರುವ ಕುಟುಂಬ ಊಟ-ನೀರು ತ್ಯಜಿಸಿದೆ. ಡಂಬೂ ಬರುವಿಕೆಗಾಗಿ ಒಂದು ವರ್ಷದ ಮಗು ಬಾಗಿಲು ನೋಡುತ್ತಿದೆ.
ಇದನ್ನೂ ಓದಿ: ಪಿಟ್‌ಬುಲ್ ಟೆರಿಯರ್ ಸೇರಿದಂತೆ 23 ‘ಅಪಾಯಕಾರಿ’ ಶ್ವಾನ ತಳಿ ನಿಷೇಧಕ್ಕೆ ಕೇಂದ್ರ ಪ್ರಸ್ತಾಪ
ಶಿವರಾತ್ರಿ ಹಬ್ಬದ ದಿನದಂದು ಹಾಸನದ ದೇವಾಯಲಕ್ಕೆ ಹೋಗಿ ದೇವರ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಕೊಂಚ ವಿಶ್ರಾಂತಿ ಪಡೆಯೋಣ ಎಂದು ಅಶೋಕ್ ಅವರು ಅರಸೀಕೆರೆ ಹೈವೇಯಲ್ಲಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಡಂಬೂ ಕೂಡ ಜೊತೆಯಲ್ಲೇ ಕಾರಿನಿಂದ ಇಳಿದಿದೆ.
ಅಶೋಕ್ ಮತ್ತು ಅಶ್ವಿನಿ ಡಂಬೂ ತಮ್ಮ ಜೊತೆಯಲ್ಲೇ ಇದೆ ಎಂದು ಭಾವಿಸಿದ್ದಾರೆ. ಆದರೆ, ಡಂಬೂ ಮಾತ್ರ ಕ್ಷಣಾರ್ಧದಲ್ಲೇ ನಾಪತ್ತೆಯಾಗಿದೆ. 10 ದಿನಗಳಿಂದ ಡಂಬೂಗಾಗಿ ನಾಪತ್ತೆಯಾದ ಪ್ರದೇಶದ ಸುತ್ತಮುತ್ತ ಅಶೋಕ್ ಅವರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಹಾಸನದ ದುಗ್ಗ ಪೊಲೀಸ್ ಠಾಣೆಗೂ ದೂರು ನೀಡಿದ್ದು, ಮನೆಯ ಮಗುವಾಗಿದ್ದ ಡಂಬೂನನ್ನ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಡಂಬೂ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೂಡ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Thu, 14 March 24