ಬೆಂಗಳೂರು, ಮಾ.14: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಲಾರಿಯೊಂದು ಹೊತ್ತಿ ಉರಿದಿದೆ. ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ(Anchepalya) ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಳ್ಳುವಾಗಲೇ ಚಾಲಕ ವಿದ್ಯಾನಂದರಾಮ್ ಪಾರಾಗಿದ್ದಾರೆ. ಇನ್ನು ಈ ಲಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಿಕೊಂಡು ಕನಕಪುರದಿಂದ ವಿಶಾಖಪಟ್ಟಣಕ್ಕೆ ಹೊರಟಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ಕೂಡಲೇ ಪೀಣ್ಯಾ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.
ಇತ್ತ ಬೆಂಕಿ ನಂದಿಸಲು ಅಗ್ನಿ ಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದರೆ, ಅಗ್ನಿ ಅವಘಡದಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಹಿನ್ನಲೆ ನೆಲಮಂಗಲ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಚಾಮರಾಜನಗರ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ: ಕಿಡಿಗೇಡಿಗಳು ಬೆಂಕಿ ಹಾಕಿರುವುದು ಮೇಲ್ನೊಟಕ್ಕೆ ಪತ್ತೆ
ಕಲಬುರಗಿ: ತಾಲೂಕಿನ ಸರಡಗಿ ಕ್ರಾಸ್ ಬಳಿ ಮಿನಿ ಲಾರಿ ಮತ್ತು ಬೈಕ್ ನಡುವೆ ಅಪಘಾತವಾಗಿ ಮಿನಿ ಲಾರಿ ಹೊತ್ತಿ ಉರಿದಿದೆ. ಎರಡು ವಾಹನಗಳ ನಡುವೆ ಅಪಘಾತದಿಂದ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಮಿನಿ ಲಾರಿಯಲ್ಲಿದ್ದ ಟೈಯರ್ಗಳಿಗೆ ಬೆಂಕಿ ತಗುಲಿ ಈ ದುರ್ಘಟನೆ ನಡೆದಿದೆ. ಮಿನಿ ಲಾರಿಯಲ್ಲಿದ್ದ ಟೈಯರ್ ಸೇರಿದಂತೆ ಲಾರಿ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಹಾಗೇ ಲಾರಿ ಚಾಲಕ ಎಸ್ಕೇಪ್ ಆಗಿದ್ದು, ಬೈಕ್ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಕಲಬುರಗಿ ಸಂಚಾರಿ 1 ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ