ಬಿಟ್ಟು ಹೋದ ಪತಿಯನ್ನು ಒಂದುಗೂಡಿಸುವುದಾಗಿ ನಂಬಿಸಿ ಮಹಿಳಾ ಎಫ್​ಡಿಎಗೆ ವಂಚನೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 30, 2023 | 8:11 AM

ಬಿಟ್ಟು ಹೋಗಿರುವ ಪತಿಯನ್ನು ವಾಪಸ್ ಜೊತೆಯಾಗಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬ ಎಫ್​ಡಿಎ ಉದ್ಯೋಗಸ್ಥ ಮಹಿಳೆಗೆ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಮಗುವಿನ ಕೈಗೆ ಗಾಯದ ಸಮಸ್ಯೆ ಆಗಿತ್ತು. ಇದನ್ನು ಔಷಧಿ ಮೂಲಕ ಸರಿಪಡಿಸಿದ್ದ ವ್ಯಕ್ತಿಯನ್ನು ನಂಬಿದ ಮಹಿಳೆ, ಪತಿಗಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಮೋಸ ಹೋಗಿದ್ದಾರೆ.

ಬಿಟ್ಟು ಹೋದ ಪತಿಯನ್ನು ಒಂದುಗೂಡಿಸುವುದಾಗಿ ನಂಬಿಸಿ ಮಹಿಳಾ ಎಫ್​ಡಿಎಗೆ ವಂಚನೆ
ಬಿಟ್ಟು ಹೋದ ಪತಿಯನ್ನು ಒಂದುಗೂಡಿಸುವುದಾಗಿ ನಂಬಿಸಿ ಎಫ್​ಡಿಎ ಉದ್ಯೋಗಸ್ಥ ಮಹಿಳೆಗೆ ವಂಚನೆ ಎಸಗಿದ ವ್ಯಕ್ತಿ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ನ.30: ಬಿಟ್ಟು ಹೋಗಿರುವ ಪತಿಯನ್ನು ವಾಪಸ್ ಜೊತೆಯಾಗಿಸುತ್ತೇನೆ ಎಂದು ನಂಬಿಸಿ ವ್ಯಕ್ತಿಯೊಬ್ಬ ಎಫ್​ಡಿಎ ಉದ್ಯೋಗಸ್ಥ ಮಹಿಳೆಗೆ ವಂಚಿಸಿದ (Cheating) ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮಹಿಳೆ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ಹಣ ಪಡೆದು ಸಿನಿಮೀಯ ಶೈಲಿಯಲ್ಲಿ ವಂಚನೆ ಮಾಡಿದ್ದಾಗಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಅತ್ತ, ಶಿರಾ ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

ನೀರಾವರಿ ಇಲಾಖೆಯಲ್ಲಿ ಎಫ್​​ಡಿಎ ಉದ್ಯೋಗ ಮಾಡುತ್ತಿರುವ ಫಾತಿಮಾ ಎಂಬ ಮಹಿಳೆಯ ಪತಿ ಬಿಟ್ಟು ಹೋಗಿದ್ದಾನೆ. ಅಲ್ಲದೆ, ತನ್ನ ಮೂರು ವರ್ಷದ ಮಗುವಿನ ಕೈಗೆ ಗಾಯದ ಸಮಸ್ಯೆಯಿತ್ತು. ಪಕ್ಕದ ಮನೆಯರ ಮಾತು ಕೇಳಿದ ಫಾತಿಮಾ ನಾಗಮಂಗಲದಲ್ಲಿರುವ ಹಜರತ್ ನೂರ್ ಮೊಹಮ್ಮದ್​ ಎಂಬಾತನ್ನು ಸಂಪರ್ಕ ಮಾಡಿ ಔಷಧಿ ಪಡೆದಿದ್ದರು. ಕಾಕತಾಳಿಯ ಎಂಬಂತೆ ಮಗುವಿನ ಕೈ ಒಂದು ವಾರದಲ್ಲಿ ಗುಣವಾಗಿತ್ತು.

ಇದನ್ನೂ ಓದಿ: 100 ಕೋಟಿ ಹಣ ವಂಚನೆ ಪ್ರಕರಣ: ಪ್ರಕಾಶ್ ರೈಗೆ ಸಮನ್ಸ್

ಇದರಿಂದ ಹಜರತ್ ನೂರ್​ನನ್ನು ಸಂಪೂರ್ಣ ನಂಬಿದ್ದ ಫಾತಿಮಾ, ಪತಿಯನ್ನ ತನ್ನ ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದರು. ಅದರಂತೆ ಪತಿ ನಿನ್ನ ಜೊತೆಗೇ ಇರುವಂತೆ ಮಾಡುತ್ತೇನೆ ಅಂತ ಒಂದು ಲಕ್ಷ ಹಣ ಪಡೆದಿದ್ದನು. ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಏಳು ಲಕ್ಷ ಕೊಡಿ, ಪ್ರತಿ ತಿಂಗಳು ಇಎಮ್ಐ ಹಣ ಕಟ್ಟುತ್ತೇನೆ ಅಂತ ನಂಬಿಸಿದ್ದಾನೆ.

ಪತಿಗಾಗಿ ಇದಕ್ಕೂ ಒಪ್ಪಿದ ಫಾತಿಮಾ, ಸಾಲ ಮಾಡಿ ಹಣವನ್ನು ನೀಡಿದ ನಂತರ ಹಜರತ್ ನೂರ್ ಪರಾರಿಯಾಗಿದ್ದಾನೆ. ಈ ಬಗ್ಗೆ ಫಾತಿಮಾ ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ, ವಂಚನೆ ಪ್ರಕರಣದಲ್ಲಿ ಶಿರಾ ಪೊಲೀಸರು ಆರೋಪಿ ಹಜರತ್​ನನ್ನು ಬಂಧಿಸಿದ್ದು, ಬಾಡಿ ವಾರೆಂಟ್ ಪಡೆಯಲು ವಿಧಾನಸೌಧ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Thu, 30 November 23