ಬಿಡಿಎನಲ್ಲಿ 2,000 ಕೋಟಿಗೂ ಹೆಚ್ಚು ಅಕ್ರಮ! ಎಸಿಬಿ ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು
ತನಿಖೆಯಲ್ಲಿ ಒಂದೇ ಊರಿನಲ್ಲಿ ಸುಮಾರು 185 ಕೋಟಿ ರೂಪಾಯಿ ಆಕ್ರಮ ನಡೆದಿರುವುದು ಬಯಲಾಗಿದೆ. ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ಆರ್ಕಾವತಿ ಬಡಾವಣೆಯಲ್ಲಿ ಭಾರಿ ಆಕ್ರಮ ಬೆಳಕಿಗೆ ಬಂದಿದೆ.
ಬೆಂಗಳೂರು: ಬಿಡಿಎನಲ್ಲಿ (BDA) ಬರೋಬ್ಬರಿ 2,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದ್ದು, ಎಸಿಬಿ ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (Corruption) ಬಯಲಾಗಿದೆ. ಕಾರ್ನರ್ ಸೈಟ್, ಆಕ್ರಮ ಪರಭಾರೆ, ನಕಲಿ ಫಲಾನುಭವಿಗಳು ಹಾಗೂ ಬದಲಿ ನಿವೇಶನ ಹಂಚಿಕೆಯಲ್ಲಿ ಭಾರಿ ಆಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. 3 ತಿಂಗಳ ಹಿಂದೆ ಬಿಡಿಎ ಮುಖ್ಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಎಸಿಬಿ ತಂಡ ಸಾಕಷ್ಟು ದಾಖಲೆಗಳನ್ನ ವಶಪಡಿಸಿಕೊಂಡಿತ್ತು.
ತನಿಖೆಯಲ್ಲಿ ಒಂದೇ ಊರಿನಲ್ಲಿ ಸುಮಾರು 185 ಕೋಟಿ ರೂಪಾಯಿ ಆಕ್ರಮ ನಡೆದಿರುವುದು ಬಯಲಾಗಿದೆ. ಕೆಂಗೇರಿ ಹೋಬಳಿಯ ಭೀಮನಕುಪ್ಪೆ ಗ್ರಾಮದ ಆರ್ಕಾವತಿ ಬಡಾವಣೆಯಲ್ಲಿ ಭಾರಿ ಆಕ್ರಮ ಬೆಳಕಿಗೆ ಬಂದಿದೆ. ಸರ್ಕಾರದ ಜಾಗವನ್ನೆ ಖಾಸಗಿ ಜಾಗ ಅಂತ ತೋರಿಸಿ ಅಧಿಕಾರಿಗಳು ಸರ್ಕಾರದಿಂದ ಪರಿಹಾರ ಪಡೆದಿದ್ದಾರೆ. ಸರ್ಕಾರಿ ಜಾಗಕ್ಕೆ ಸುಮಾರು 185 ಕೋಟಿ ರೂ. ಪರಿಹಾರ ಪಡೆದಿರುವುದು ಪತ್ತೆಯಾಗಿದೆ.
ಹಸಿರು ವಲಯಕ್ಕೆ ಒಳಪಡುವ ಹೆಣ್ಣೂರು ಬಳಿ ಗಾಲ್ಫ್ ಮೈದಾನದ ಹೆಸರಲ್ಲಿ ರಿಯಲ್ ಎಸ್ಟೇಟ್ ಕಂಪನಿ 460 ವಿಲ್ಲಾ ನಿರ್ಮಿಸಿದೆ. ಪ್ರತಿಷ್ಠಿತ 60 ನಿವೇಶನಗಳನ್ನು ಬಿಡಿಎ ಅಧಿಕಾರಿಗಳು ನುಂಗಿದ್ದಾರೆ. ಮುಂಜೂರಾಗದೆ ಉಳಿದಿರುವ 60 ನಿವೇಶನಗಳನ್ನ ಗುಳುಂ ಮಾಡಿದ್ದಾರೆ. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಗುಳುಂ ಮಾಡಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಈ ಅಕ್ರಮದಲ್ಲಿ 60 ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ 45 ಅಧಿಕಾರಗಳ ವಿರುದ್ಧ ಎಫ್ಐಆರ್ ದಾಖಲಿಸಲು ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ನಕಲಿ ದಾಖಲೆ ಮೂಲಕ ಕ್ರಯಪತ್ರವನ್ನು ತಯಾರಿಸುತ್ತಿದ್ದ ಆರೋಪಿಗಳ ವಿರುದ್ಧ ಎಫ್ಐಆರ್: ಜನವರಿ 25ಕ್ಕೆ ಬಿಡಿಎನಲ್ಲಿ ಅಕ್ರಮವೆಸಗಿದ ಸುಮಾರು 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಡಿಎಸ್ 3 ಅನಿಲ್ ಕುಮಾರ್, ಡಿಎಸ್ 4 ಎಸ್ ಎಮ್ ಮಂಗಳಾ, ಅನಿಲ್ ಕುಮಾರ್ ಸೇರಿ, ನಕಲಿ ಫಲಾನುಭವಿಗಳಾದ ಅಪ್ಪಯ್ಯಣ್ಣ, ಶ್ರೀನಿವಾಸರೆಡ್ಡಿ, ಕಮರುನ್ನೀಸಾ, ರುಕ್ಮಿಣಿ, ರಾಜೇಂದ್ರ, ಗುಲಾಬ್ ಜಾನ್, ಶಶಿಕುಮಾರ್, ಬಿಡಿಎ ಕೇಸ್ ವರ್ಕರ್ ವೆಂಕಟರಮಣಪ್ಪ, ಸಂಜಯ್ ಕುಮಾರ್, ಕಮಲಮ್ಮ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ
ಹಿಜಾಬ್ ವಿಚಾರಕ್ಕೆ ತಲೆ ಹಾಕಿದ ಸೋನಂ ಕಪೂರ್; ಇನ್ನೊಂದು ಧರ್ಮವನ್ನು ಪ್ರಶ್ನಿಸಿ ಟೀಕೆಗೆ ಗುರಿಯಾದ ನಟಿ
Published On - 8:43 am, Sat, 12 February 22