ಶಾಸಕ, ಸಿಎಂ ಆಗಬೇಕೆಂದು ಕಾಂಗ್ರೆಸ್‌ಗೆ ಸೇರದೆ, ಸಿದ್ಧಾಂತ ಒಪ್ಪಿ ಬನ್ನಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ
ಸಿಎಂ ಆಗಬೇಕೆಂದೇ ಪಕ್ಷಕ್ಕೆ ಸೇರುತ್ತಾರೆ. ಶಾಸಕ, ಸಿಎಂ ಆಗಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಡಿ. ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರು: 1969ರಲ್ಲಿ ಮೊದಲ ಬಾರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಬಳಿಕ ಹಂತಹಂತವಾಗಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದೇನೆ. ಈಗ ಸೋನಿಯಾಗಾಂಧಿರವರು ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದು ಸರ್ವೋದಯ ಸಮಾವೇಶದಲ್ಲಿ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನವೇರಿ ಮೊದಲ ಬಾರಿಗೆ ಖರ್ಗೆ ರಾಜ್ಯಕ್ಕೆ ಆಗಮಿಸಿದ್ದು, ಈ ಸಂಬಂಧ ಕೆಪಿಸಿಸಿ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಏರ್ಪಡಿಸಿತ್ತು.
ಈ ಸಮಾರಂಭದಲ್ಲಿ ಮಾತನಾಡಿದ ಅವರು ಈಗ ಶಾಸಕ, ಸಿಎಂ ಆಗಬೇಕೆಂದೇ ಪಕ್ಷಕ್ಕೆ ಸೇರುತ್ತಾರೆ. ಶಾಸಕ, ಸಿಎಂ ಆಗಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಡಿ. ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿ ಎಂದು ಖಡಕ್ ಸೂಚನೆ ನೀಡಿದರು.
ಕಳೆದ 70 ವರ್ಷದಿಂದ ಏನು ಮಾಡಿದ್ದೀರೆಂದು ಪ್ರಧಾನಿ ನರೇಂದ್ರ ಮೋದಿ ಕೇಳುತ್ತಾರೆ. ನಾವು ಕೆಲಸ ಮಾಡಿದ್ದರಿಂದಲೇ ದೇಶ ಈ ಹಂತಕ್ಕೆ ಬೆಳೆದಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿದೆ. ಹಿಂದಿನ ಯಾವ ಸರ್ಕಾರ ಈ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಪದೇಪದೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕೆ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಗಾಂಧಿ ಕುಟುಂಬದ ತ್ಯಾಗ, ಕೊಡುಗೆ ಸಾಕಷ್ಟಿದೆ. ಇದರಲ್ಲಿ ಸ್ವಲ್ಪನಾದರೂ ನೀವು ಕೊಟ್ಟಿದ್ದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ತಾಯಿ, ಮಕ್ಕಳ ಪಕ್ಷವೆಂದು ಪ್ರಧಾನಿ ಮೋದಿ ಕಾಂಗ್ರೆಸ್ನ್ನು ಟೀಕಿಸುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೇಕೆ ? ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ, ದೇಶದ ಅಭಿವೃದ್ಧಿ ಕಡೆ ಚಿಂತೆ ಮಾಡಿ ಎಂದು ಟೀಕೆ ಮಾಡಿದರು.
ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಪ್ರಧಾನಿ ಮೋದಿ ಎಚ್ಚೆತ್ತಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಹೀಗಾಗಿ ಒಗ್ಗಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ತರೋಣ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭಾ ಚುನಾವಣೆ ಬಹಳ ಮಹತ್ವದ್ದು. ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಡೋಣ. 40 ಪರ್ಸೆಂಟ್ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೇ ಪಕ್ಷ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನಪರ ಯೋಜನೆಗಳ ಜಾರಿಯಾಗಿದ್ದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಆಗಿತ್ತು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Sun, 6 November 22