ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Rikki Rai) ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು(Srinivas Naidu)ವಿರುದ್ದ ದೂರು ದಾಖಲಾಗಿದೆ. ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ಅವರು ದೂರು ನೀಡಿದ್ದಾರೆ. ನಿನ್ನೆ(ಮೇ.26) ರಾತ್ರಿ ಊಟಕ್ಕೆಂದು ರಿಕ್ಕಿ ರೈ ಲ್ಯಾವೆಲ್ಲಿ ರಸ್ತೆಯ ಖಾಜಿ ಬಾರ್ ಅಂಡ್ ಕಿಚನ್ ಹೋಟೆಲ್ಗೆ ಹೋಗಿದ್ದರು. ಈ ವೇಳೆ ಶ್ರೀನಿವಾಸ್ ನಾಯ್ಡು ಮೂರು ನಾಲ್ಕು ಜನರೊಂದಿಗೆ ಬಂದು, ಏಕಾಏಕಿ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ರಿಕ್ಕಿ ರೈ ಹಣೆಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿಲಾಯ್ತು. ಪೊಲೀಸರು ಬಂದಿದ್ದೇ ಶ್ರೀನಿವಾಸ ನಾಯ್ಡು ಅವರ ಜೊತೆ ಇದ್ದವರು ಎಸ್ಕೇಪ್ ಆಗಿದ್ದಾರೆ ಎಂದು ದೂರು ನೀಡಿದ್ದಾರೆ. ಇನ್ನು ಸೋಮಶೇಖರ್ ದೂರಿನನ್ವಯ ಎಫ್ ಐ ಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.
ಉದ್ಯಮಿ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಪ್ರಕರಣ; ಮುತ್ತಪ್ಪ ರೈ ಮಗ ಸೇರಿ 8 ಜನರ ವಿರುದ್ಧ ಚಾರ್ಜ್‌ಶೀಟ್
ಇನ್ನು ಇದೇ ಉದ್ಯಮಿ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಸದಾಶಿವನಗರ ಠಾಣೆ ಪೊಲೀಸರು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಮುತ್ತಪ್ಪ ರೈ ಮಗ ರಿಕ್ಕಿ ರೈ ಸೇರಿದಂತೆ 8 ಜನರ ಮೇಲೆ ಪ್ರಕರಣ ಸಂಬಂಧ 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆರೋಪಿಗಳಾದ ರಿಕ್ಕಿ ರೈ, ನಾರಾಯಣಸ್ವಾಮಿ, ಅಭಿನಂದನ್, ಮುನಿಯಪ್ಪ,ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಸೇರಿ 8 ಜನರ ಹೆಸರುಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು. 2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡುಗೆ ಸೇರಿದ ಕೋಟ್ಯಾಂತರ ರೂ ಬೆಲೆ ಬಾಳುವ ಐಷಾರಾಮಿ ಕಾರಿಗೆ ಬೆಂಕಿ ಹಚ್ಚಿ ನಾಶ ಮಾಡಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ಆತನ ತಂಡದ ಸದಸ್ಯರ ಮೇಲೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ:ಬೆಂಗಳೂರು: ಆಪ್ ರಾಜ್ಯ ಯುವ ಘಟಕದ ಉಪಾಧ್ಯಕ್ಷರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೆ ಯತ್ನ
ರಿಕ್ಕಿ ರೈ ಮತ್ತು ಶ್ರೀನಿವಾಸ್ ನಾಯ್ಡು ಇಬ್ಬರೂ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಮಾಜಿ ಡಾನ್ ಮುತ್ತಪ್ಪ ರೈ ನಿಧನದ ನಂತರ ರೈ ಗ್ರೂಪ್‌ನಿಂದ ಶ್ರೀನಿವಾಸ್ ನಾಯ್ಡು ಹೊರ ಬಂದಿದ್ದರು. ನಾಯ್ಡು ಹೊರ ಬಂದಿದ್ದಕ್ಕೆ ರಿಕ್ಕಿ ರೈಗೆ ಕೋಪ ಬಂದಿತ್ತು, ದ್ವೇಷ ಹುಟ್ಟಿಕೊಂಡಿತ್ತು. ಹೀಗಾಗಿ ಶ್ರೀನಿವಾಸ್ ನಾಯ್ಡು ಬಳಸುತ್ತಿದ್ದ ಬ್ಲಾಕ್ ಕಲರ್ ರೇಂಜ್ ರೋವರ್ ಕಾರನ್ನು ನೋಡಿದ ರಿಕ್ಕಿ ರೈ ಘಟನೆಗೂ ಮೂರು ತಿಂಗಳು ಮೊದಲು ಶ್ರೀನಿವಾಸ್ ನಾಯ್ಡುಗೆ ವಾರ್ನ್ ಮಾಡಿದ್ದ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡ್ತಿಯಾ ನೋಡ್ತೀನಿ. ಈ ಕಾರನ್ನು ಬೂದಿ ಮಾಡ್ತೀನಿ ಎಂದು ಹೇಳಿದ್ದ.
ಅದರಂತೆ ನಾರಾಯಣ ಸ್ವಾಮಿ ಎಂಬಾತನ ಮೂಲಕ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು ಮೊದಲಿಗೆ ಶ್ರೀನಿವಾಸ್ ನಾಯ್ಡು ಸ್ನೇಹಿತ ಸುಪ್ರೀತ್ ಮೇಲೆ ಹಲ್ಲೆ ನಡೆಸಿ ಬಳಿಕ ಶ್ರೀನಿವಾಸ್ ನಾಯ್ಡು ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆಗೆ ಯತ್ನಿಸಲಾಗಿತ್ತು. ಈ ಪ್ಲಾನ್ ಮಿಸ್ ಆದಾಗ ಕಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬುಲೆಟ್ ಮತ್ತು ಕಾರಿನಿಂದ ಪೆಟ್ರೋಲ್ ಎಳೆದಿದ್ದ ಆರೋಪಿಗಳು ಕಾರಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:28 am, Sat, 27 May 23