ಬೆಂಗಳೂರು: ರಾಜ್ಯಸಭಾ (Rajyasabha) ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಟ ಜಗ್ಗೇಶ್ (Actor Jaggesh) ಹೆಸರನ್ನು ನಿನ್ನೆ ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್, ನನಗೆ ಯಾವ ನಿರೀಕ್ಷೆ ಇರಲಿಲ್ಲ. ನಾನು ಬಹಳ ನಿಷ್ಠೆಯಿಂದ ಪಕ್ಷಕ್ಕೆ ಕೆಲಸ ಮಾಡಿದ್ದೆ. ಸಿಎಂ, ಸ್ನೇಹಿತರು, ಶಾಸಕರು, ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ಈ ಸ್ಥಾನ ಕೊಟ್ಟಿದ್ದಾರೆ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ. ನನಗೆ ಹಿರಿಯರು ಫೋನ್ ಮಾಡಿ ದಾಖಲೆ ರೆಡಿ ಮಾಡಿಕೊಳ್ಳಲು ಹೇಳಿದರು. ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ. ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ತಿಳಿಸಿದರು.
ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡುತ್ತಿದ್ದಾಳೆ. ನನಗೆ ನಿರೀಕ್ಷೆ ಇಲ್ಲದಿದ್ದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ ಎಂದು ಜಗ್ಗೇಶ್ ತಿಳಿಸಿದರು.
ಟಿಕೆಟ್ಗಾಗಿ ನಾನು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ತಿಳಿಸಿದ ಜಗ್ಗೇಶ್, ನಾನು ಯಾವ ಹುದ್ದೆಯನ್ನೂ ಕೇಳಿಲ್ಲ. ಕಳೆದ ಬಾರಿ ಕಡೆ ಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದ್ದರು. ಅವತ್ತು ನನ್ನ ಮೇಲೆ ವಿಶ್ವಾಸ ಇತ್ತು. 12 ಸಾವಿರ ಇದ್ದ ಮತಗಳನ್ನು 61 ಸಾವಿರ ಮತಕ್ಕೆ ತಂದಿದ್ದೆ. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ ನನ್ನ ವೃತ್ತಿಯಲ್ಲಿ ಮುಂದುವರೆಯುತ್ತಿದ್ದೆ. ನನಗೆ ಪಕ್ಷದ ವಕ್ತಾರ ಹುದ್ದೆ ಕೊಟ್ಟಿದ್ದರು. ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೆ. ರಾಜ್ಯಸಭೆಯಲ್ಲಿ ಕನ್ನಡ ಡಿಂಡಿಮ ಬಾರಿಸುತ್ತೇನೆ ಎಂದರು.
45 ಮತಗಳು ಬೇಕು:
ರಾಜ್ಯ ಸಭೆಯ ಅಭ್ಯರ್ಥಿ ಆಯ್ಕೆಗೆ 45 ಮತಗಳು ಬೇಕು. ಸದ್ಯ ಬಿಜೆಪಿ ಬಳಿ 122, ಕಾಂಗ್ರೆಸ್ 71, ಜೆಡಿಎಸ್ ಬಳಿ 32 ಸೀಟ್ ಇದೆ.
Published On - 11:38 am, Mon, 30 May 22