ಬೆಂಗಳೂರು: ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ(KSRTC) ಕಡೆಯಿಂದ ಸೆಪ್ಟೆಂಬರ್ 8, 9ರಂದು ಬೆಂಗಳೂರಿನಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್‌ಗಳನ್ನು ಬಿಟ್ಟಿದ್ದು 1,000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಸೆಪ್ಟೆಂಬರ್ 12ರಂದು ಬೆಂಗಳೂರಿಗೆ ಆಗಮಿಸುವವರಿಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಂದ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಧರ್ಮಸ್ಥಳ, ಶಿವಮೊಗ್ಗ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಮಂಗಳೂರು, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಸೇರಿ ಹಲವಡೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 9 ಮತ್ತು 10 ರಂದು ದೇಶದಾದ್ಯಂತ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತೆ. ಸದ್ಯ ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದು, 1 ವಾರ್ಡ್‌ಗೆ 1 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ. ಗಣೇಶ ಮೂರ್ತಿ ಕೂರಿಸುವ ಆಯೋಜಕರು 2 ಡೋಸ್ ಕೊರೊನಾ ಲಸಿಕೆಯನ್ನು ಪಡೆದಿರಬೇಕು. ಎಲ್ಲಿ ಮೂರ್ತಿ ಇಡಬೇಕು ಎಂದು ಇನ್ಸ್‌ಪೆಕ್ಟರ್, ಎಸಿಪಿಗಳು ಪರಿಶೀಲಿಸಿ ಸ್ಥಳ ಗುರುತಿಸುತ್ತಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. 3 ದಿನಕ್ಕಿಂತ ಹೆಚ್ಚು ಗಣೇಶಮೂರ್ತಿಯನ್ನ ಇಡುವಂತಿಲ್ಲ ಎಂದು ತಿಳಿಸಿದ್ದಾರೆ.
ಸ್ಥಳೀಯ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಕೆಲ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಮತಿ, ಸ್ವಚ್ಛತೆ ಕಾಪಾಡುವ ಬಗ್ಗೆ ಪಾಲಿಕೆಯ ವಾರ್ಡ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಕೊವಿಡ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ. ಗಣೇಶ ಮೂರ್ತಿಯನ್ನು 3 ದಿನ ಮಾತ್ರ ಇಡಲು ಅನುಮತಿ ಇದೆ. ಮೂರ್ತಿಯನ್ನು ಮನೆಯಲ್ಲಿ ಅಥವಾ ಮೊಬೈಲ್ ಟ್ಯಾಂಕ್‌ನಲ್ಲಿ ವಿಸರ್ಜನೆ ಮಾಡಬೇಕು. ಇಲ್ಲದಿದ್ದರೆ ಕೃತಕ ವಿಸರ್ಜನಾ ಕೇಂದ್ರಗಳಲ್ಲಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶ ಚತುರ್ಥಿ ವಿಶೇಷ: ಚಿತ್ರಕಲಾ ಪರಿಷತ್ನಲ್ಲಿ ಲೋಹದ ಗಣೇಶ ವಿಗ್ರಹಗಳ ಪ್ರದರ್ಶನ, ಮಾರಾಟ
Published On - 1:16 pm, Tue, 7 September 21