ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ; ಬೆಂಗಳೂರಿನಲ್ಲಿ 22,362 ಕೊರೊನಾ ಸೋಂಕಿತರು ಪತ್ತೆ

ಆತಂಕಕಾರಿ ವಿಚಾರವೆಂದರೆ ಸದರಿ ಪರೀಕ್ಷೆಗೆ ಒಳಪಟ್ಟವರೆಲ್ಲರೂ ತಮಗೆ ಸೋಂಕಿಲ್ಲವೆಂದು ಭಾವಿಸಿ ಮನೆಯಲ್ಲೇ ಇದ್ದರು. ಇವರ್ಯಾರಿಗೂ ಸೋಂಕಿನ ಲಕ್ಷಣಗಳಾಗಲೀ, ತೀವ್ರ ತೊಂದರೆಯಾಗಲೀ ಬಾಧಿಸದ ಕಾರಣ ಕೊರೊನಾಕ್ಕೆ ತುತ್ತಾಗಿರುವ ಅಂದಾಜೇ ಇರಲಿಲ್ಲ.

ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ; ಬೆಂಗಳೂರಿನಲ್ಲಿ 22,362 ಕೊರೊನಾ ಸೋಂಕಿತರು ಪತ್ತೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Skanda

Sep 07, 2021 | 11:53 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಹದ್ದುಬಸ್ತಿಗೆ ಬಂದಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆಯಾದರೂ ಪರಿಸ್ಥಿತಿ ಗಂಭೀರವಾಗಿದೆ ಎನ್ನುವುದಕ್ಕೆ ಬಿಬಿಎಂಪಿ ಸಮೀಕ್ಷೆ ಸಾಕ್ಷಿಯಾಗಿದೆ. ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 22,362 ಜನರಿಗೆ ಕೊರೊನಾ ಸೋಂಕು ಸಕ್ರಿಯವಾಗಿರುವುದು ಪತ್ತೆಯಾಗಿದೆ. 21 ದಿನಗಳಲ್ಲಿ 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 22,362 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಆತಂಕಕಾರಿ ವಿಚಾರವೆಂದರೆ ಸದರಿ ಪರೀಕ್ಷೆಗೆ ಒಳಪಟ್ಟವರೆಲ್ಲರೂ ತಮಗೆ ಸೋಂಕಿಲ್ಲವೆಂದು ಭಾವಿಸಿ ಮನೆಯಲ್ಲೇ ಇದ್ದರು. ಇವರ್ಯಾರಿಗೂ ಸೋಂಕಿನ ಲಕ್ಷಣಗಳಾಗಲೀ, ತೀವ್ರ ತೊಂದರೆಯಾಗಲೀ ಬಾಧಿಸದ ಕಾರಣ ಕೊರೊನಾಕ್ಕೆ ತುತ್ತಾಗಿರುವ ಅಂದಾಜೇ ಇರಲಿಲ್ಲ. ಆದರೆ, ಬಿಬಿಎಂಪಿ ವೈದ್ಯರು ಮನೆಗೆ ಬಂದು ತಪಾಸಣೆ ಮಾಡಿದಾಗಲೇ ಸೋಂಕು ಇರುವುದು ಧೃಡವಾಗಿದೆ.

ಬಿಬಿಎಂಪಿ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆಯಡಿ ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ 21 ದಿನಗಳ ಅವಧಿಯಲ್ಲಿ 7,11,648 ಜನರ ಆರೋಗ್ಯ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ವೇಳೆ 22,362 ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ 22 ಸಾವಿರ ಜನರಿಗೆ ತಮ್ಮಲ್ಲಿ‌ ಕೊರೊನಾ‌ ಸೋಂಕು ಇದೆ ಎಂಬ ವಿಚಾರವೇ ಗೊತ್ತಿರಲಿಲ್ಲವಾದ್ದರಿಂದ ಅವರು ಎಂದಿನಂತೆ ಇದ್ದರು. ಬಿಬಿಎಂಪಿ ವೈದ್ಯರು ಮನೆ ಮನೆಗೂ ಹೋಗಿ ತಪಾಸಣೆ ಮಾಡಿದ್ದರಿಂದಷ್ಟೇ ಸೋಂಕು ಇರುವ ವಿಚಾರ ಬೆಳಕಿಗೆ ಬಂದಿದೆ.  ಇದು ಆಘಾತಕಾರಿ ಬೆಳವಣಿಗೆಯ ಮುನ್ಸೂಚನೆಯಾಗಿದ್ದು ಒಂದು ವೇಳೆ ಹೀಗೆ ಲಕ್ಷಣಗಳಿಲ್ಲದೇ ಸೋಂಕು ಹಬ್ಬುತ್ತಾ ಹೋಗಿ ಏಕಾಏಕಿ ಹೆಚ್ಚಳವಾದಲ್ಲಿ ಮೂರನೇ ಅಲೆ ಗಂಭೀರವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದೇ ಹೊತ್ತಿನಲ್ಲಿ ಬಿಬಿಎಂಪಿ ಡೆತ್ ಆಡಿಟ್ ವರದಿಯನ್ನು (BBMP Death Audit Report) ತಯಾರಿಸಿದ್ದು ಅದರಲ್ಲಿ ಸಾವಿಗೆ ಕಾರಣವಾದ ಸಂಗತಿಯ ಅಸಲಿಯತ್ತು ಬಯಲಾಗಿದೆ. ಕೊರೊನಾ 2 ನೇ ಅಲೆಯಲ್ಲಿ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ಡೆತ್ ಆಡಿಟ್ ವರದಿಯಲ್ಲಿ ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಿಸಿದ 30-40 ಗಂಟೆಗಳಲ್ಲೇ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರು ಕೊನೆಯುಸಿರೆಳೆದಿದ್ದಾರೆ. ಸೋಂಕು ಕಾಣಿಸಿಕೊಂಡ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದ ರೋಗಿಗಳಲ್ಲೇ ಮರಣ ಪ್ರಮಾಣ ಹೆಚ್ಚಿತ್ತು ಎನ್ನುವ ಅಂಶ ಇದೀಗ ಹೊರಬಿದ್ದಿದೆ.

ಈ ವರದಿಯ ಬೆನ್ನಲ್ಲೇ ಮತ್ತೊಂದು ಆತಂಕ ಶುರುವಾಗಿದ್ದು, ಬಿಬಿಎಂಪಿ ನಡೆಸಿದ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಮೇಲಿನ ಅಂಶ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಶೇಕಡಾ 50.86 ಜನರಿಗೆ ಡಯಾಬಿಟಿಸ್ ಹಾಗೂ ಶೇಕಡಾ 36 ರಷ್ಟು ಜನರಿಗೆ ಹೈಪರ್ ಟೆನ್ಷನ್ ಇರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಬಿಬಿಎಂಪಿ 21 ದಿನಗಳ ಅವಧಿಯಲ್ಲಿ 2,48,280 ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿದ್ದು, 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಸಮೀಕ್ಷೆಗೆ ಒಳಪಟ್ಟ 7,11,648 ಜನರಲ್ಲಿ ಶೇಕಡಾ 50.86 ರಷ್ಟು ಜನರು ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಶೇಕಡಾ 36 ರಷ್ಟು ಜನರು ಹೈಪರ್ ಟೆನ್ಷನ್ ಸಮಸ್ಯೆ ಹೊಂದಿದ್ದಾರೆ. ಕೊರೊನಾ‌ ಎರಡನೇ ಅಲೆಯಲ್ಲಿ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರೇ ಅತಿ ಹೆಚ್ಚು ಪ್ರಮಾಣದಲ್ಲಿ ಸಾವಿಗೀಡಾಗಿರುವುದರಿಂದ ಮೂರನೇ ಅಲೆ ಎದುರಿಸುವುದು ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕೊರೊನಾ ಲಸಿಕೆ; WHO ವರದಿ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಗೆ ನಿಗಾ ವಹಿಸಲು ಸೂಚಿಸಿದ ಕೇಂದ್ರ 

ಡಯಾಬಿಟಿಸ್​, ಹೈಪರ್​ ಟೆನ್ಷನ್​ ಇದ್ದ ಕೊರೊನಾ ಸೋಂಕಿತರು ಬೇಗ ಸಾವಿಗೀಡಾಗಿದ್ದಾರೆ: ಬಿಬಿಎಂಪಿ ಡೆತ್​ ಆಡಿಟ್​ ವರದಿ ಹೇಳಿದ ಸತ್ಯ

(BBMP House survey 22362 corona patients found in Bengaluru within 21 days)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada