ಡಯಾಬಿಟಿಸ್, ಹೈಪರ್ ಟೆನ್ಷನ್ ಇದ್ದ ಕೊರೊನಾ ಸೋಂಕಿತರು ಬೇಗ ಸಾವಿಗೀಡಾಗಿದ್ದಾರೆ: ಬಿಬಿಎಂಪಿ ಡೆತ್ ಆಡಿಟ್ ವರದಿ ಹೇಳಿದ ಸತ್ಯ
BBMP Death Audit Report: ಈ ವರದಿಯ ಬೆನ್ನಲ್ಲೇ ಮತ್ತೊಂದು ಆತಂಕ ಶುರುವಾಗಿದ್ದು, ಬಿಬಿಎಂಪಿ ನಡೆಸಿದ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಶೇಕಡಾ 50.86 ಜನರಿಗೆ ಡಯಾಬಿಟಿಸ್ ಹಾಗೂ ಶೇಕಡಾ 36 ರಷ್ಟು ಜನರಿಗೆ ಹೈಪರ್ ಟೆನ್ಷನ್ ಇರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಬೆಂಗಳೂರು: ಕೊರೊನಾ 2ನೇ ಅಲೆ (Corona 2nd Wave) ಸೃಷ್ಟಿಸಿದ್ದ ಭೀತಿಯನ್ನು ಜನ ಇನ್ನೂ ಮರೆತಿಲ್ಲ. ಏಕಾಏಕಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ ಗಂಭೀರಾವಸ್ಥೆ ತಲುಪಿದವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಕೊನೆಯುಸಿರೆಳೆದವರಿಗೆ ಮುಕ್ತಿ ಕಾಣಿಸಲು ಸ್ಮಶಾನದಲ್ಲಿ ಜಾಗ ಸಿಗದೇ ಪರದಾಡಿದ ಕಹಿ ನೆನಪುಗಳು ಇನ್ನೂ ಮಾಸಿಲ್ಲ. ಇದೇ ಹೊತ್ತಿನಲ್ಲಿ ಬಿಬಿಎಂಪಿ ಡೆತ್ ಆಡಿಟ್ ವರದಿಯನ್ನು (BBMP Death Audit Report) ತಯಾರಿಸಿದ್ದು ಅದರಲ್ಲಿ ಸಾವಿಗೆ ಕಾರಣವಾದ ಸಂಗತಿಯ ಅಸಲಿಯತ್ತು ಬಯಲಾಗಿದೆ.
ಕೊರೊನಾ 2 ನೇ ಅಲೆಯಲ್ಲಿ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ಡೆತ್ ಆಡಿಟ್ ವರದಿಯಲ್ಲಿ ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಿಸಿದ 30-40 ಗಂಟೆಗಳಲ್ಲೇ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರು ಕೊನೆಯುಸಿರೆಳೆದಿದ್ದಾರೆ. ಸೋಂಕು ಕಾಣಿಸಿಕೊಂಡ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದ ರೋಗಿಗಳಲ್ಲೇ ಮರಣ ಪ್ರಮಾಣ ಹೆಚ್ಚಿತ್ತು ಎನ್ನುವ ಅಂಶ ಇದೀಗ ಹೊರಬಿದ್ದಿದೆ.
ಈ ವರದಿಯ ಬೆನ್ನಲ್ಲೇ ಮತ್ತೊಂದು ಆತಂಕ ಶುರುವಾಗಿದ್ದು, ಬಿಬಿಎಂಪಿ ನಡೆಸಿದ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಶೇಕಡಾ 50.86 ಜನರಿಗೆ ಡಯಾಬಿಟಿಸ್ ಹಾಗೂ ಶೇಕಡಾ 36 ರಷ್ಟು ಜನರಿಗೆ ಹೈಪರ್ ಟೆನ್ಷನ್ ಇರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಬಿಬಿಎಂಪಿ 21 ದಿನಗಳ ಅವಧಿಯಲ್ಲಿ 2,48,280 ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ನಡೆಸಿದ್ದು, 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಸಮೀಕ್ಷೆಗೆ ಒಳಪಟ್ಟ 7,11,648 ಜನರಲ್ಲಿ ಶೇಕಡಾ 50.86 ರಷ್ಟು ಜನರು ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಶೇಕಡಾ 36 ರಷ್ಟು ಜನರು ಹೈಪರ್ ಟೆನ್ಷನ್ ಸಮಸ್ಯೆ ಹೊಂದಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರೇ ಅತಿ ಹೆಚ್ಚು ಪ್ರಮಾಣದಲ್ಲಿ ಸಾವಿಗೀಡಾಗಿರುವುದರಿಂದ ಮೂರನೇ ಅಲೆ ಎದುರಿಸುವುದು ಬಿಬಿಎಂಪಿಗೆ ದೊಡ್ಡ ಸವಾಲಾಗಿದೆ.
ಕೊರೊನಾ ಡೆತ್ ಆಡಿಟ್ ವರದಿ ಹಾಗೂ ಬಿಬಿಎಂಪಿಯ ಮನೆ ಮನೆ ಆರೋಗ್ಯ ಸಮೀಕ್ಷೆ ನೀಡಿದ ವರದಿಯಲ್ಲಿ ಕೊರೊನಾ ಲಸಿಕೆ ಪಡೆದಿದ್ದರೂ ಡಯಾಬಿಟಿಸ್ ಹೊಂದಿದ ಕೊರೊನಾ ಸೋಂಕಿತರು ಬದುಕಿಲ್ಲ ಎನ್ನುವುದು ತೀವ್ರ ಕಳವಳಕಾರಿಯಾಗಿದೆ. ಕೊರೊನಾ ಧೃಡ ಪಟ್ಟ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ರೋಗಿಗಳು ಆಸ್ಪತ್ರೆಗೆ ದಾಖಲಾದ 30-40 ಗಂಟೆಯಲ್ಲಿ ಸಾವಿಗೀಡಾಗಿದ್ದಾರೆ ಎನ್ನುವುದು ಆಘಾತಕಾರಿಯಾಗಿದೆ. ಈಗ 3 ನೇ ಅಲೆ ತೀವ್ರಗೊಂಡಲ್ಲಿ ಡಯಾಬಿಟಿಸ್ ರೋಗಿಗಳನ್ನ ರಕ್ಷಿಸುವುದು ದೊಡ್ಡ ಸವಾಲಾಗಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರಿಗೆ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇರುವುದರಿಂದ ಸೋಂಕು ತಗುಲಿದ ನಂತರ ಜೀವಕ್ಕೆ ಆಪತ್ತು ಎದುರಿಸುವವರ ಪ್ರಮಾಣವೂ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕದಲ್ಲಿ ತಜ್ಞರಿದ್ದಾರೆ.
ಇದನ್ನೂ ಓದಿ: ಡೆಲ್ಟಾ ಪ್ರಭೇದದ ವಿರುದ್ಧ ಕೊರೊನಾ ಲಸಿಕೆ ಪರಿಣಾಮಕಾರಿ: ಐಸಿಎಂಆರ್
Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 983 ಜನರಿಗೆ ಕೊರೊನಾ ದೃಢ; 21 ಮಂದಿ ಸಾವು