ಮಾರುಕಟ್ಟೆಗೆ ಬಂದಿದೆ ನಕಲಿ ಕೊರೊನಾ ಲಸಿಕೆ; WHO ವರದಿ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಗೆ ನಿಗಾ ವಹಿಸಲು ಸೂಚಿಸಿದ ಕೇಂದ್ರ

2021ರ ಜುಲೈ ಹಾಗೂ ಆಗಸ್ಟ್​ ಅವಧಿಯಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ವರದಿಯೂ ಲಭ್ಯವಾಗಿದ್ದು, ಕೊವಿಶೀಲ್ಡ್​ ಲಸಿಕೆಯ ತಯಾರಕರಾದ ಸೆರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಕೊವಿಶೀಲ್ಡ್​ ಹೆಸರಲ್ಲಿ ಇರುವ ನಕಲಿ ಉತ್ಪನ್ನಗಳನ್ನು ಗುರುತಿಸಿ ಅದು ತಮ್ಮದಲ್ಲ ಎಂದು ಹೇಳಿದೆ. 

ಮಾರುಕಟ್ಟೆಗೆ ಬಂದಿದೆ ನಕಲಿ ಕೊರೊನಾ ಲಸಿಕೆ; WHO ವರದಿ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಗೆ ನಿಗಾ ವಹಿಸಲು ಸೂಚಿಸಿದ ಕೇಂದ್ರ
ಕೊರೊನಾ ಲಸಿಕೆ
TV9kannada Web Team

| Edited By: Skanda

Sep 07, 2021 | 8:30 AM

ವಿಶ್ವ ಆರೋಗ್ಯ ಸಂಸ್ಥೆಯು (WHO) ಏಷ್ಯಾ ಹಾಗೂ ಆಫ್ರಿಕಾದ ಕೆಲ ಭಾಗಗಳಲ್ಲಿ ನಕಲಿ ಕೊವಿಶೀಲ್ಡ್​ (Covishield) ಲಸಿಕೆ ತಯಾರಿಸುತ್ತಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ ಬೆನ್ನಲ್ಲೇ ಭಾರತೀಯ ಆರೋಗ್ಯ ಇಲಾಖೆಯೂ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೊರೊನಾ ಲಸಿಕೆಯ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ನಕಲಿ ಕೊರೊನಾ ಲಸಿಕೆಯ ಜಾಲ ಸಕ್ರಿಯವಾಗುತ್ತಿರುವುದು ಕಳವಳಕಾರಿಯಾಗಿದ್ದು, ಸರ್ಕಾರ ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು. ಲಸಿಕೆಯ ಅಸಲಿಯತ್ತು ಅರಿಯಲು ಮೇಲ್ವಿಚಾರಕರನ್ನು ನೇಮಿಸಬೇಕು. ಯಾವುದೇ ಕಾರಣಕ್ಕೂ ನಕಲಿ ಲಸಿಕೆ ಜಾಲ ಭಾರತದಲ್ಲಿ ಬೇರೂರಬಾರದು ಎಂದು ಎಚ್ಚರಿಸಿದೆ.

ಕೊರೊನಾ ಲಸಿಕೆಯನ್ನು ಬಳಸುವ ಮುನ್ನ ಅದರ ಅಸಲಿಯತ್ತಿನ ಬಗ್ಗೆ ಪರೀಕ್ಷೆ ಮಾಡಿಕೊಳ್ಳಬೇಕು. ಯಾವ ಲಸಿಕೆ ಅಸಲಿ ಎಂದು ಕಂಡು ಹಿಡಿಯುವ ಬಗ್ಗೆ ಕೇಂದ್ರ ಪರಿಪೂರ್ಣವಾದ ಮಾಹಿತಿಯನ್ನು ಎಲ್ಲಾ ಸಿಬ್ಬಂದಿ ವರ್ಗಕ್ಕೆ ಒದಗಿಸಿದೆ. ಭಾರತದಲ್ಲಿ ಸದ್ಯ ನೀಡಲಾಗುತ್ತಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆಗಳ ಅಸಲಿ ವಯಲ್​ಗಳನ್ನು ಕಂಡುಹಿಡಿಯುವುದು ಹೇಗೆ ಎಂಬ ಕುರಿತು ತಿಳಿಸಲಾಗಿದೆ. ಹೀಗಾಗಿ ಅದನ್ನು ಬಹು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂಬ ಸೂಚನೆಯನ್ನು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೊವಿಶೀಲ್ಡ್​ (ChAdOx1 nCoV-19 Corona Virus Vaccines-Recombinant) ಲಸಿಕೆಯ ಹೆಸರಲ್ಲಿ ಲಭ್ಯವಿರುವ ನಕಲಿ ಉತ್ಪನ್ನಗಳನ್ನು ಆಫ್ರಿಕಾ ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಪತ್ತೆ ಮಾಡಿದೆ. 2021ರ ಜುಲೈ ಹಾಗೂ ಆಗಸ್ಟ್​ ಅವಧಿಯಲ್ಲಿ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ವರದಿಯೂ ಲಭ್ಯವಾಗಿದ್ದು, ಕೊವಿಶೀಲ್ಡ್​ ಲಸಿಕೆಯ ತಯಾರಕರಾದ ಸೆರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (Serum Institute of India Pvt. Ltd.) ಕೊವಿಶೀಲ್ಡ್​ ಹೆಸರಲ್ಲಿ ಇರುವ ನಕಲಿ ಉತ್ಪನ್ನಗಳನ್ನು ಗುರುತಿಸಿ ಅದು ತಮ್ಮದಲ್ಲ ಎಂದು ಹೇಳಿದೆ.

ಅಸಲಿ ಕೊವಿಶೀಲ್ಡ್​ ಲಸಿಕೆಯು ಜಾಗತಿಕ ಮಟ್ಟದಲ್ಲಿ ಜನರ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಆದರೆ, ಅದರ ಹೆಸರಲ್ಲಿ ತಯಾರಾಗುತ್ತಿರುವ ನಕಲಿ ಉತ್ಪನ್ನಗಳು ಅದಕ್ಕೆ ತದ್ವಿರುದ್ಧವಾಗಿ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡುವ ಅಪಾಯವಿದೆ. ಹೀಗಾಗಿ ಅಧಿಕೃತವಾಗಿ ನೀಡಲಾದ ಮಾರ್ಗಸೂಚಿ ಅನ್ವಯ ತಯಾರಾದ ಲಸಿಕೆಗಳನ್ನು ಮಾತ್ರ ಪ್ರೋತ್ಸಾಹಿಸಬೇಕು. ಯಾವುದೇ ಕಾರಣಕ್ಕೂ ನಕಲಿ ಉತ್ಪನ್ನಗಳು ಜನರ ದೇಹ ಸೇರಬಾರದು. ನಕಲಿ ಲಸಿಕೆಗಳನ್ನು ನಿರ್ಮೂಲನೆ ಮಾಡಲು ಎಲ್ಲರೂ ಕೈ ಜೋಡಿಸುವುದು ಅತ್ಯಗತ್ಯ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

ಅಸಲಿ ಲಸಿಕೆಗಳನ್ನು ಗುರುತಿಸಲೆಂದೇ ತಯಾರಿಕಾ ಸಂಸ್ಥೆಗಳು ಈಗಾಗಲೇ ಸಾಕಷ್ಟು ಬಗೆಯ ಕ್ರಮಗಳನ್ನು ಪಾಲಿಸುತ್ತಿವೆ. ಕೊವ್ಯಾಕ್ಸಿನ್​ ಲಸಿಕೆಯ ಲೇಬಲ್​ನಲ್ಲಿ ಯುವಿ ಲೈಟ್​ ಮೂಲಕ ನೋಡಿದಾಗ ಮಾತ್ರ ಗುರುತಿಸಬಹುದಾದ ಡಿಎನ್​ಎ ಮಾದರಿ ಚಿತ್ರವನ್ನು ಮುದ್ರಿಸಲಾಗಿದೆ. ಅದೇ ರೀತಿ ಬೇರೆ ಬೇರೆ ಅಕ್ಷರಗಳನ್ನು ಮುದ್ರಿಸಲಾಗಿದೆ. ಎಲ್ಲಾ ತಯಾರಕರು ಈ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆರೋಗ್ಯ ಇಲಾಖೆ, ಸಿಬ್ಬಂದಿ ಇದನ್ನು ನಿಗಾ ವಹಿಸಿ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಡಯಾಬಿಟಿಸ್​, ಹೈಪರ್​ ಟೆನ್ಷನ್​ ಇದ್ದ ಕೊರೊನಾ ಸೋಂಕಿತರು ಬೇಗ ಸಾವಿಗೀಡಾಗಿದ್ದಾರೆ: ಬಿಬಿಎಂಪಿ ಡೆತ್​ ಆಡಿಟ್​ ವರದಿ ಹೇಳಿದ ಸತ್ಯ 

ಡೆಲ್ಟಾ ಪ್ರಭೇದದ ವಿರುದ್ಧ ಕೊರೊನಾ ಲಸಿಕೆ ಪರಿಣಾಮಕಾರಿ: ಐಸಿಎಂಆರ್

(Carefully monitor Corona Vaccine before use says Union health ministry after WHO report on Fake vaccines)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada