ಬೆಂಗಳೂರು, ಫೆಬ್ರವರಿ 13: ಏರೋ ಇಂಡಿಯಾ ನಾಲ್ಕನೇ ದಿನವಾದ ಇಂದು ಸಾರ್ವಜನಿಕರಿಗೆ ಏರ್ ಶೋ (Air Show) ವೀಕ್ಷಣೆಗೆ ಅವಕಾಶ ಕೊಡಲಾಗಿತ್ತು. ಬೆಳಗ್ಗೆಯಿಂದಲೇ ಯಲಹಂಕ ಏರ್ ಬೇಸ್ ನತ್ತ ಗುಂಪು ಗುಂಪಾಗಿ ಜನರು ಬಂದಿದ್ದರಿಂದ ಯಲಹಂಕ, ಹೆಬ್ಬಾಳ ಸುತ್ತಮುತ್ತ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಇತ್ತ ಏರ್ ಶೋ ಅಂಗಳಕ್ಕೆ ಎಂಟ್ರಿಕೊಟ್ಟ ಸಂಸದ ತೇಜಸ್ವಿಸೂರ್ಯ ಪೈಲೆಟ್ ಡ್ರೆಸ್ ಹಾಕಿ ಟ್ರೈನಿ ಏರ್ ಕ್ರಾಫ್ಟ್ ನಲ್ಲಿ ಹಾರಾಟ ನಡೆಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನರು ಲೋಹದ ಹಕ್ಕಿಗಳ ಕಲರವವನ್ನ ಕಣ್ತುಂಬಿಕೊಂಡರು.
ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ನಾಲ್ಕನೇ ದಿನವಾದ ಇಂದು ಕೂಡ ಯಲಹಂಕ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿತು. ಇಂದು ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ನೀಡಿದ್ದರಿಂದ ಬೆಳಗ್ಗೆಯಿಂದಲೇ ಹೆಚ್ಚಿನ ಜನರು ಯಲಹಂಕ ಏರ್ ಬೇಸ್ ನತ್ತ ಬಂದಿದ್ದರಿಂದ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್: ನಾಲ್ಕೈದು ಕಿ.ಮೀಗಟ್ಟಲ್ಲೇ ನಿಂತ ವಾಹನಗಳು
ಇನ್ನು ಸರ್ವೀಸ್ ರಸ್ತೆ, ಮುಖ್ಯರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ದ್ವಿಚಕ್ರವಾಹನ ಸವಾರರು ಫುಟ್ ಪಾತ್ ಗಳ ಮೇಲೆಯೇ ಸಾಗ್ತಿದ್ದ ದೃಶ್ಯಗಳು ಕಂಡುಬಂತು. ಇತ್ತ ಕಳೆದ ಮೂರು ದಿನಗಳಿಂದ ಟ್ರಾಫಿಕ್ ಸಮಸ್ಯೆ ಎದುರಿಸ್ತಿದ್ದ ಸಿಟಿಮಂದಿ ಏರ್ ಶೋ ಗೆ ಸರಿಯಾಗಿ ಟ್ರಾಫಿಕ್ ಮ್ಯಾನೇಜ್ ಮಾಡುವ ವ್ಯವಸ್ಥೆ ಮಾಡಿಲ್ಲ ಅಂತಾ ಕಿಡಿಕಾರಿದ್ದರು.
ಇನ್ನು ಏರ್ ಶೋ ವೀಕ್ಷಣೆಗೆ ಇಂದು ಮತ್ತು ನಾಳೆ ಸಾರ್ವಜನಿಕರಿಗೂ ಪ್ರವೇಶ ನೀಡಿರುವುದರಿಂದ ಎಂದಿಗಿಂತ ಇಂದು ಹೆಚ್ಚಿನ ಜನದಟ್ಟಣೆ ಕಂಡುಬಂತು. ಇತ್ತ ಬೆಳಗ್ಗೆಯೇ ಏರ್ ಫೋರ್ಸ್ ಅಧಿಕಾರಿಗಳ ಜೊತೆ ಪೈಲೆಟ್ ರೀತಿ ರೆಡಿಯಾಗಿ ರನ್ ವೇಗೆ ಎಂಟ್ರಿಕೊಟ್ಟ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ, HAL ನಿರ್ಮಿಸಿರುವ HBT 40 ಟ್ರೈನಿ ಏರ್ ಕ್ರಾಫ್ಟ್ ನಲ್ಲಿ 20 ನಿಮಿಷಗಳ ಕಾಲ ಹಾರಾಟ ನಡೆಸಿದ್ರು. ಬಳಿಕ ಸಂತಸ ಹಂಚಿಕೊಂಡ ತೇಜಸ್ವಿಸೂರ್ಯ, HBT 40 ನಮ್ಮ ಹೆಮ್ಮೆ ಇಂತ ಆವಿಷ್ಕಾರಗಳು ಮತ್ತಷ್ಟು ಬೇಕು ಎಂದಿದ್ದಾರೆ.
ಇತ್ತ ಬೆಳಗ್ಗೆ 9.30 ರಿಂದ 12 ಗಂಟೆ ತನಕ ನಡೆದ ಏರ್ ಶೋ ಪ್ರದರ್ಶನದಲ್ಲಿ ರಷ್ಯಾ ಯುದ್ಧವಿಮಾನ ಸುಖೋಯ್, ಭಾರತದ ಯುದ್ಧ ವಿಮಾನ ತೇಜಸ್, ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಸೂರ್ಯಕಿರಣ್ ತಂಡ ಪ್ರೇಕ್ಷಕರನ್ನ ಮಂತ್ರಮುಗ್ದರನ್ನಾಗಿಸಿತು. ಮಧ್ಯಾಹ್ನದ ಬಳಿಕ ನಡೆದ ಎರಡನೇ ಶೋ ನಲ್ಲೂ ಲೋಹದ ಹಕ್ಕಿಗಳ ಕಲರವ ಕಂಡು ಖುಷಿಪಟ್ಟ ಜನರು, ಅತ್ತ ಏರ್ ಬೇಸ್ ಅಂಗಳದಲ್ಲಿರೋ ಎಕ್ಸಿಬಿಷನ್ ಸೆಂಟರ್ ಗಳಿಗೂ ಗುಂಪು ಗುಂಪಾಗಿ ಎಂಟ್ರಿಕೊಡುವ ಮೂಲಕ ಹೊಸ ಹೊಸ ಆವಿಷ್ಕಾರಗಳನ್ನ ಕಣ್ತುಂಬಿಕೊಂಡರು.
ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕದಲ್ಲಿ ಏರ್ ಟ್ಯಾಕ್ಸಿ ಅನಾವರಣ: 10 ನಿಮಿಷದಲ್ಲೇ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ
ಇನ್ನು ನಾಲ್ಕನೇ ದಿನದ ಏರ್ ಶೋನಲ್ಲಿ ಅಮೇರಿಕಾದ ಏರ್ ಫೋರ್ಸ್ ಬ್ಯಾಂಡ್ ತಂಡ ನಡೆಸಿದ ಬ್ಯಾಂಡ್ ಮ್ಯೂಸಿಕ್ಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಜೊತೆ ಹೆಜ್ಜೆಹಾಕಿದರು. ಎಕ್ಸಿಬಿಷನ್ನಲ್ಲಿ ಪ್ರದರ್ಶನಕ್ಕಿಟ್ಟಿರೋ ರಕ್ಷಣಾ ವ್ಯವಸ್ಥೆಯ ಉಪಕರಣಗಳು, ವಿವಿಧ ಬಗೆಯ ಲಘುವಿಮಾನಗಳು ಹಾಗೂ ಸ್ಟಾಲ್ಗಳ ಬಳಿ ಫೋಟೋಶೂಟ್ ಮಾಡಿ ಖುಷಿಪಟ್ಟರು. ಮಕ್ಕಳು, ಕುಟುಂಬದ ಜೊತೆ ಏರ್ ಬೇಸ್ ಅಂಗಳಕ್ಕೆ ಬಂದ ಜನರು ಲೋಹದ ಹಕ್ಕಿಗಳನ್ನ ಕಂಡು ಫುಲ್ ಖುಷ್ ಆಗಿದ್ದಾರೆ. ಸದ್ಯ ಐದು ದಿನಗಳ ಏರ್ ಶೋಗೆ ನಾಳೆ ತೆರೆಬೀಳಲಿದ್ದು, ಕೊನೆದಿನವಾದ ನಾಳೆ ಕೂಡ ಯಲಹಂಕದ ಸುತ್ತಮುತ್ತಲಿನ ಜನರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.