ಬೆಂಗಳೂರಿನ ಆಗಸದಲ್ಲಿ ಮಿಂಚುತ್ತಿರುವ ದೇಶ ವಿದೇಶಗಳ ವೈಮಾನಿಕ ಶಕ್ತಿ; ಯಲಹಂಕ ಏರೋಶೋನ ಝಲಕ್
Bangalore Aero Show 2025: ರಫೇಲ್, ಸುಖೋಯ್, ಎಫ್-35, ಕೆಸಿ 135, ಎಲ್ಯುಎಚ್, ಐಜೆಟಿ ಇತ್ಯಾದಿ ಅತ್ಯಾಧುನಿಕ ಫೈಟರ್ ಜೆಟ್, ಟ್ರೈನರ್ ಜೆಟ್, ಫೈಟರ್ ಹೆಲಿಕಾಪ್ಟರ್ಗಳು ಬೆಂಗಳೂರು ಏರೋ ಶೋದಲ್ಲಿ ಪ್ರದರ್ಶನ ನಡೆಸಿವೆ. 78 ದೇಶಗಳು 15ನೇ ಬೆಂಗಳೂರು ಏರೋ ಶೋನದಲ್ಲಿ ಪಾಲ್ಗೊಂಡಿದ್ದು, ನಿನ್ನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೋಗೆ ಚಾಲನೆ ಮಾಡಿದ್ದರು. ಫೆಬ್ರುವರಿ 14ರವರೆಗೂ ಏರೋ ಶೋ ನಡೆಯಲಿದೆ.

ಬೆಂಗಳೂರು, ಫೆಬ್ರುವರಿ 11: ಇಲ್ಲಿಯ ಯಲಹಂಕ ವಾಯು ನೆಲೆಯಲ್ಲಿ ಕಳೆದ ಮೂರು ದಶಕಗಳಿಂದ ಆಯೋಜನೆಯಾಗುತ್ತಿರುವ ಏರೋ ಶೋ ಪ್ರತೀ ಬಾರಿಯಂತೆ ಈಗಲೂ ದೇಶ ವಿದೇಶಗಳ ಗಮನ ಸೆಳೆದಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ವಾಯು ಪ್ರದರ್ಶನ ನಿನ್ನೆ ಆರಂಭವಾಗಿ ಫೆಬ್ರುವರಿ 14ಕ್ಕೆ ಮುಗಿಯುತ್ತದೆ. 15ನೇ ಬೆಂಗಳೂರು ಏರೋ ಶೋಗೆ 78 ದೇಶಗಳ ವಾಯು ಶಕ್ತಿ ಪ್ರದರ್ಶನ ನಡೆಯುತ್ತಿದೆ. ಫ್ರಾನ್ಸ್ನ ರಫೇಲ್, ರಷ್ಯಾದ ಸುಖೋಯ್, ಅಮೆರಿಕದ ಎಫ್-35 ಸ್ಟೀಲ್ತ್ ಫೈಟರ್ಗಳು ಸೇರಿದಂತೆ ಹಲವು ಪ್ರಮುಖ ಯುದ್ಧ ವಿಮಾನಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಏರೋ ಶೋ ಇರುತ್ತದೆ. ರಕ್ಷಣಾ ಕ್ಷೇತ್ರದ ಉದ್ಯಮಗಳು, ಉಪಕರಣ, ಶಸ್ತ್ರಾಸ್ತ್ರ ತಯಾರಕರು, ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ. ಪ್ರತೀ ಬಾರಿಯಂತೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದಿಂದ ಅದ್ಭುತ ವೈಮಾನಿಕ ಪ್ರದರ್ಶನ ನಡೆಯಿತು. ಏರೋಶೋನ ಎರಡನೇ ದಿನ ಸೂರ್ಯಕಿರಣ್ ತಂಡದ ವಿವಿಧ ಜೆಟ್ ವಿಮಾನಗಳು ಸಂಯೋಜಿತ ರೀತಿಯಲ್ಲಿ ಹಾರಾಟ ನಡೆಸಿ ಆಗಸದಲ್ಲಿ ಭಾರತ ಬಾವುಟದ ಬಣ್ಣಗಳ ಚಿತ್ತಾರ ನಡೆಸಿದವು.
ಕೆಸಿ135, ಹೆಚ್ಟಿಟಿ-40, ಎಲ್ಸಿಎ ಎಂಕೆ 1ಎ, ಎಲ್ಯುಎಚ್, ಸುಖೋಯ್ 57, ಐಜೆಟಿ, ಸುಖೋಯ್ 30 ಎಂಕೆಐ, ಹನ್ಸಾ, ಎಫ್35, ಹಾಕ್ ಇತ್ಯಾದಿ ವಿಮಾನಗಳು ಯಲಹಂಕ ವಾಯು ನೆಲೆ ಬಳಿ ಆಗಸದಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರಿದವು. ಎಲ್ಸಿಎ, ಹನ್ಸಾ ವಿಮಾನಗಳು ದೇಶೀಯವಾಗಿ ಅಭಿವೃದ್ಧಿಗೊಂಡಿರುವುದು ವಿಶೇಷ. ಸುಖೋಯ್ 57 ರಷ್ಯಾದ ಅತ್ಯಾಧುನಿಕ ಸ್ಟೀಲ್ತ್ ಜೆಟ್ ಫೈಟರ್ ವಿಮಾನವಾಗಿದೆ. ಅಮೆರಿಕದ ಎಫ್-35 ಸದ್ಯ ವಿಶ್ವದ ಅತ್ಯಂತ ಪ್ರಬಲ ಫೈಟರ್ ವಿಮಾನ ಎನಿಸಿದೆ.
ಇದನ್ನೂ ಓದಿ: ಏರ್ಶೋ: ಏರ್ಪೋರ್ಟ್ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್
ಐಎಎಫ್ ಜೊತೆ ಜಿಇ ಏರೋಸ್ಪೇಸ್ನಿಂದ ಒಪ್ಪಂದಕ್ಕೆ ಸಹಿ
ಅಮೆರಿಕದ ಜಿಇ ಏರೋಸ್ಪೇಸ್ ಸಂಸ್ಥೆ ಎಚ್ಎಎಲ್ ನಿರ್ಮಿತ ಎಎಚ್-64ಇ-ಐ ಅಪಾಚೆ ಹೆಲಿಕಾಪ್ಟರ್ಗಳಿಗೆ ಎಂಜಿನ್ಗಳನ್ನು ಒದಗಿಸಲು ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಟಿ700 ಎಂಜಿನ್ಗಳ ಎಂಆರ್ಒ ಸೇವೆಯನ್ನು ಜಿಇ ಏರೋಸ್ಪೇಸ್ ಒದಗಿಸಲಿದೆ.
ಅದಾನಿ ಡಿಫೆನ್ಸ್ ಮತ್ತು ಡಿಆರ್ಡಿಒದಿಂದ ಡ್ರೋನ್ ನಿಗ್ರಹ ವಾಹನ
ಗಡಿಯೊಳಗೆ ನುಸುಳಿ ಬರುವ ಶತ್ರುಗಳ ಡ್ರೋನ್ಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಬಲ್ಲ ಡ್ರೌನ್ ನಿಗ್ರಹ ಸಿಸ್ಟಂ ಅನ್ನು ಇಂದು ಮಂಗಳವಾರ ಅನಾವರಣಗೊಳಿಸಲಾಯಿತು. ಇದು ವಾಹನವೊಂದರ ಮೇಲೆ ಇರಿಸಲಾಗುವ ಸಿಸ್ಟಂ ಆಗಿದ್ದು 10 ಕಿಮೀ ದೂರ ವ್ಯಾಪ್ತಿಯಲ್ಲಿರುವ ಯಾವುದೇ ಡ್ರೋನ್ ಅನ್ನು ಹೈ ಎನರ್ಜಿ ಲೇಸರ್ ಸಿಸ್ಟಂ ಮೂಲಕ ನ್ಯೂಟ್ರಲೈಸ್ ಮಾಡಬಲ್ಲುದು. ಡಿಆರ್ಡಿಒ ಮತ್ತು ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆಗಳು ಜಂಟಿಯಾಗಿ ಈ ಕೌಂಟರ್ ಡ್ರೋನ್ ಸಿಸ್ಟಂ ಅನ್ನು ತಯಾರಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ