ಬೆಂಗಳೂರು, ಜುಲೈ 22: ಬೆಂಗಳೂರಿನ ಜಿಟಿ ಮಾಲ್ನಲ್ಲಿ ಪಂಚೆ ಹಾಕಿದ್ದ ರೈತನಿಗೆ ಕಳೆದ ಸೋಮವಾರ ಸೆಕ್ಯೂರಿಟಿ ಗಾರ್ಡ್ ಪ್ರವೇಶ ನಿರಾಕರಿಸಿದ್ದು ದೊಡ್ಡ ಸುದ್ದಿಯಾಯಿತು. ನಂತರ ಆ ವಿಚಾರ ಸದನದಲ್ಲೂ ಚರ್ಚೆ ಆಗಿತ್ತು. ಸ್ಪೀಕರ್, ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು. ನಂತರ ಟ್ಯಾಕ್ಸ್ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಬಿಬಿಎಂಪಿ ಸದ್ಯ ಏಳು ದಿನಗಳ ಕಾಲ ಮಾಲ್ ಕ್ಲೋಸ್ ಮಾಡಿಸಿದೆ.
ಈ ಹಿನ್ನೆಲೆಯಲ್ಲಿ, ಇನ್ನುಮುಂದೆ ಯಾವುದೇ ಮಾಲ್, ಕ್ಲಬ್ ಸೇರಿದಂತೆ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ ಮಾಡುವಂತಿಲ್ಲ. ಡ್ರೆಸ್ ಕೋಡ್ ಕಡ್ಡಾಯ ಮಾಡಬಾರದು ಎಂದು ಪ್ರತ್ಯೇಕ ಕಾನೂನು ರಚನೆ ಮಾಡಲು ನಗರಾಭಿವೃದ್ದಿ ಇಲಾಖೆ ಮುಂದಾಗಿದೆ. ಈ ಬಗ್ಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಯಾವುದೇ ಮಾಲ್, ಕ್ಲಬ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲೂ ಸೀರೆ ಪಂಚೆ ಹಾಕಿಕೊಂಡು ಬರುವ ಜನರಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಒಂದು ವೇಳೆ ಪ್ರವೇಶ ನಿರಾಕರಿಸಿದರೆ ಆ ಮಾಲ್, ಕ್ಲಬ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಬಂದ್ ಮಾಡುವುದು ಅಥವಾ ಭಾರಿ ಮೊತ್ತದ ದಂಡ ವಿಧಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳ ಜೊತೆಯಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಸಚಿವರ ನಡೆಗೆ ಸಾರ್ವಜನಿಕರಿಂದ ಅಭಿನಂದನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಂದ ಹೊಸ ಪ್ಲಾನ್!
ಒಟ್ಟಿನಲ್ಲಿ ಕೆಲ ಮಾಲ್, ರೆಸ್ಟೋರೆಂಟ್, ಪಬ್, ಕ್ಲಬ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ಗಳಲ್ಲಿ ಡ್ರೆಸ್ ಕೋಡ್ ರೂಲ್ಸ್ ಫಾಲೋ ಮಾಡಿ ರೈತರು, ಬಡವರಿಗೆ ಅವಮಾನಿಸಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಯ ನಡೆಯಿಂದ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ನಿಯಮ ಜಾರಿ ಆದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ