ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ 12 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಾರ್ಪೊರೇಟ್ ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರು ಮತ್ತು ಕೂಲಿಕಾರ್ಮಿಕರನ್ನು ರಕ್ಷಿಸುವಂತೆ ಒತ್ತಾಯ ಕೇಳಿಬಂದಿದೆ. ರೈತ ವಿರೋಧಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಬೆಲೆ ಏರಿಕೆ ನಿಯಂತ್ರಿಸುವಂತೆ ಹೋರಾಟಗಾರರು ಆಗ್ರಹ ವ್ಯಕ್ತಪಡಿಸಿದ್ದಾರೆ. ರೈತರು, ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕನಿಷ್ಠ 26 ಸಾವಿರ ರೂ. ವೇತನ ನಿಗದಿಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರನ್ನು ನೌಕರರೆಂದು ಪರಿಗಣಿಸಿ ನ್ಯಾಯಬದ್ಧ ಸವಲತ್ತು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
ಚಿತ್ರದುರ್ಗದಲ್ಲಿ ಕೂಡ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ನೂತನ ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಲು ಆಗ್ರಹ ಸೇರಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಕೇಳಿಬಂದಿದೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ನಗರದ ಗಾಂಧಿವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಧರಣಿ ನಡೆಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಹಾಸನ ನಗರದ ಡಿಸಿ ಕಚೇರಿ ಎದುರು ಹೊರಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹಿಸಿ ಕರ್ನಾಟಕ ಮಕ್ಕಳ ರಕ್ಷಣಾ ನಿರ್ದೇಶನಾಲಯ ಧರಣಿ ನಡೆಸಿದೆ. ಸರ್ಕಾರಿ ಪ್ರಾಯೋಜಿತ ಹೊರಗುತ್ತಿಗೆ ಹೆಸರಿನ ಶೋಷಣೆ ರದ್ದಾಗಲಿ ಎಂದು ಆಗ್ರಹಿಸಿ ಮನವಿ ಸಲ್ಲಿಕೆ ಮಾಡಲಾಗಿದೆ. ಅಲ್ಲದೆ, ಹಾಸನದಲ್ಲಿ ಬೆಲೆ ಏರಿಕೆ ಕನಿಷ್ಠ ವೇತನ ಏರಿಕೆಗೆ ಆಗ್ರಹಿಸಿ ಕಾರ್ಮಿಕರ ಹೋರಾಟ ನಡೆಸಲಾಗಿದೆ. ಸಾವಿರಾರು ಕಾರ್ಮಿಕರಿಂದ ರಸ್ತೆ ತಡೆ ನಡೆಸಿ ಹೋರಾಟ ಮಾಡಲಾಗಿದೆ. ಹಾಸನದ ತಹಶಿಲ್ದಾರ್ ಕಛೇರಿ ಎದುರು ರಸ್ತೆ ತಡೆ ಮಾಡಲಾಗಿದೆ. ರಸ್ತೆ ತಡೆಯಿಂದ ಬಿಎಂ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಸಿಐಟಿಯು, ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರ ಹೋರಟ ನಡೆಯುತ್ತಿದ್ದು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ಎಐಯುಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಧರಣಿ ಮಾಡಿದ್ದಾರೆ. ಡಿಸಿ ಕಛೇರಿ ಎದುರು ನೂರಾರು ಆಶಾ ಕಾರ್ಯಕರ್ತೆ ಯರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಮಿಕರ ಅಖಿಲಭಾರತ ಮುಷ್ಕರ ಹಿನ್ನೆಲೆಯಲ್ಲಿ ಧರಣಿ ನಡೆಸಲಾಗಿದೆ. ಡಿಸಿ ಕಛೇರಿ ಎದುರು ದರಣಿ ನಡೆಸಿ ಮನವಿ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ: ದೇಶದಾದ್ಯಂತ ಸರ್ಕಾರಿ ನೌಕರರ ಪ್ರತಿಭಟನೆ; ಮುಷ್ಕರಕ್ಕೆ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ಬೆಂಬಲ
ಇದನ್ನೂ ಓದಿ: ರಾಜಸ್ಥಾನ ರಾಜ್ಯ ಸರ್ಕಾರದ ವಿರುದ್ಧ ಶಾಸಕನ ಪ್ರತಿಭಟನೆ; ಪಾರ್ಕ್ನಲ್ಲಿ 12 ತಾಸು ಓಡುವುದಾಗಿ ಘೋಷಣೆ