ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು ಪ್ರಕರಣ; 5 ಲಕ್ಷ ರೂ. ಚೆಕ್ ಪಡೆಯದೇ ಹೆಚ್ಚಿನ ಪರಿಹಾರ ಮೊತ್ತಕ್ಕಾಗಿ ಕುಟುಂಬಸ್ಥರಿಂದ ಒತ್ತಾಯ
ಐದು ಲಕ್ಷ ಪರಿಹಾರ ನೀಡಲು ಬಂದಿದ್ದ ಬಿಬಿಎಂಪಿ ಅಧಿಕಾರಿಗಳಲ್ಲಿ ಪರಿಹಾರದ ಮೊತ್ತ ಏರಿಕೆ ಮಾಡುವಂತೆ ಅಕ್ಷಯಾ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಈಗ ಬಿಬಿಎಂಪಿ ಅಧಿಕಾರಿಗಳು ತಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಪಡೆಯದೇ ಅಕ್ಷಯಾ ಕುಟುಂಬಸ್ಥರು ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ಮೃತ ಅಕ್ಷಯಾ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಹಣವನ್ನು ಬಿಬಿಎಂಪಿ(BBMP) ಘೋಷಣೆ ಮಾಡಿದೆ. ಮೊನ್ನೆ (ಮಾರ್ಚ್ 21) ಹೆಬ್ಬಾಳದ ಬಳಿ ಬಿಬಿಎಂಪಿ ಕಸದ ಲಾರಿ(Lorry) ಹರಿದು ಬಾಲಕಿ ಅಕ್ಷಯಾ ಸಾವನ್ನಪ್ಪಿದ್ದಳು. ಹೀಗಾಗಿ ಇಂದು ಅಕ್ಷಯಾ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್(Check) ನೀಡಲು ಬಿಬಿಎಂಪಿ ಅಧಿಕಾರಿಗಳು ಬಂದಿದ್ದರು. ಆದರೆ ಬಿಬಿಎಂಪಿ ಪರಿಹಾರದ ಚೆಕ್ ಅನ್ನು ಅಕ್ಷಯಾ ಕುಟುಂಬ ತಿರಸ್ಕರಿಸಿದೆ.
ಐದು ಲಕ್ಷ ಪರಿಹಾರ ನೀಡಲು ಬಂದಿದ್ದ ಬಿಬಿಎಂಪಿ ಅಧಿಕಾರಿಗಳಲ್ಲಿ ಪರಿಹಾರದ ಮೊತ್ತ ಏರಿಕೆ ಮಾಡುವಂತೆ ಅಕ್ಷಯಾ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಈಗ ಬಿಬಿಎಂಪಿ ಅಧಿಕಾರಿಗಳು ತಂದ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಪಡೆಯದೇ ಅಕ್ಷಯಾ ಕುಟುಂಬಸ್ಥರು ವಾಪಸ್ ಕಳುಹಿಸಿದ್ದಾರೆ.
ಅಶೋಕ ಬಾಗಿ ಟಿ.ವಿ.ಸಿ ವಿಭಾಗದಿಂದ ಬಿಡುಗಡೆ
ಹೆಬ್ಬಾಳದ ಬಳಿ ಅಕ್ಷಯಾ ಅಪಘಾತ ಪ್ರಕರಣದಿಂದ ಪಾದಚಾರಿ ಕೆಳಸೇತುವೆ ಮತ್ತು ಮೇಲುಸೇತುವೆಗಳ ನಿರ್ವಹಣೆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲ ಹಿನ್ನಲೆಯಲ್ಲಿ ರಸ್ತೆ ಮೂಲಭೂತ ಸೌಕರ್ಯ ಟಿ.ಇ.ಸಿ ವಿಭಾಗದಿಂದ ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಆಗಿರುವ ಅಶೋಕ ಅವರನ್ನು ಈ ಕೂಡಲೇ ಬಿಡುಗಡೆಗೊಳಿಸಲು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ಸೂಚನೆ ನೀಡಿದ್ದಾರೆ.
ಹೇಗಾಯಿತು ದುರ್ಘಟನೆ: ಅಂಡರ್ ಪಾಸ್ ಇದ್ದರೂ ಬಳಸದೇ ರಸ್ತೆ ದಾಟಲು ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ಮುಂದಾಗಿದ್ದರು. ಈ ವೇಳೆ ಮುಂದೆ ಬಂದ ಬೈಕ್ ಮತ್ತು ಕಾರ್ ಗಳನ್ನು ನಿಲ್ಲಿಸಿದ್ದರು. ಆದರೆ ಅದರ ಹಿಂಬದಿಯಲ್ಲಿ ವೇಗವಾಗಿ ಬರುತಿದ್ದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ. ಮತ್ತೋರ್ವ ಪಾದಚಾರಿ ಸೌಮ್ಯ (28) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಬೈಕ್ ಸವಾರ ವಿಕಾಸ್ (40) ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕಿ ಅಕ್ಷಯಾಳ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಡರ್ ಪಾಸ್ನಲ್ಲಿ ನೀರು ನಿಂತಿತ್ತು ಮಳೆ ನೀರಿನಿಂದ ಅಂಡರ್ ಪಾಸ್ನಲ್ಲಿ ನೀರು ನಿಂತಿತ್ತು. ಹಾಗಾಗಿ ಜನರಿಗೆ ಅಂಡರ್ ಪಾಸ್ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಅನಿವಾರ್ಯವಾಗಿ ಹೆದ್ದಾರಿ ರಸ್ತೆ ಮೇಲೆಯೆ ನಡೆದಾಡುತ್ತಿದ್ದಾರೆ. ಈ ವೇಳೆ ಈ ದಾರುಣ ಘಟನೆ ನಡೆದಿದೆ.
ಬುದ್ಧಿ ಕಲಿಯದ ಬಿಬಿಎಂಪಿ ಅಧಿಕಾರಿಗಳು, ಬ್ಲೇಮ್ ಗೇಮ್: ಇತ್ತೀಚೆಗೆ ರಸ್ತೆ ಗುಂಡಿಗೆ ಒಬ್ಬರು ಬಲಿಯಾಗಿದ್ದರು. ಆ ವರದಿ ಪ್ರಸಾರವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ತರಾತುರಿಯಲ್ಲಿ ಗುಂಡಿ ಮುಚ್ಚಿ, ಆ ಗುಂಡಿ ತೆಗೆದಿದ್ದು ನಾವಲ್ಲ, ಜಲಮಂಡಳಿ ಎಂದು ಸಬೂಬು ಹೇಳಿ ಜಾರಿಕೊಂಡಿತ್ತು. ಆದರೆ ಅಷ್ಟೊತ್ತಿಗೆ ಒಂದು ಪ್ರಾಣ ಹೋಗಿತ್ತು. ಆ ಪ್ರಕರಣದಲ್ಲಿ ಮುಂದೆ ಜಲಮಂಡಳಿಯವರು ಆ ಗುಂಡಿ ತೋಡಿದ್ದು ನಾವಲ್ಲ; ಆ ರಸ್ತೆಯಲ್ಲಿ ನಾವೂ ಯಾವುದೇ ಕಾಮಗಾರಿ ನಡೆಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲಿಗೆ ಬ್ಲೇಮ್ ಗೇಮ್ ಗುಂಡಿಯನ್ನು ಬಿಬಿಎಂಪಿ ತನ್ನ ಮೇಲೆಯೆ ತೋಡಿಕೊಂಡಿತ್ತು.
ಈ ಪ್ರಕರಣದಲ್ಲೂ ಅದೇ ರೀತಿ ಬಾಲಕಿಯ ಸಾವಿನ ಬಳಿಕ ಅಂಡರ್ ಪಾಸ್ ಕ್ಲೀನ್ ಗೆ ಬಿಬಿಎಂಪಿ ಸಿಬ್ಬಂದಿ ಮುಂದಾಗಿದ್ದಾರೆ. ನಿಂತಿದ್ದ ನೀರನ್ನು ಹೊರ ಹಾಕುತ್ತಿದ್ದಾರೆ. ಅದರೊಂದಿಗೆ ಸಾವಿನ ಬಳಿಕವಾದರೂ ಜನ ಸರಾಗವಾಗಿ ಅಂಡರ್ ಪಾಸ್ ಮೂಲಕ ರಸ್ತೆ ದಾಟಲಿ ಎಂಬ ಸದಾಶಯ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ!
ಬಿಬಿಎಂಪಿ ಕಸದ ಲಾರಿಗೆ ಸಿಕ್ಕಿ ಬಾಲಕಿ ಸಾವು; ಪೊಲೀಸರೇ ದೂರು ನೀಡಿದ್ದರೂ ಬಿಬಿಎಂಪಿ ಕಂಟ್ರೋಲ್ ರೂಂ ಡೋಂಟ್ ಕೇರ್!
Published On - 4:06 pm, Wed, 23 March 22