ಮಹಾರಾಷ್ಟ್ರದಲ್ಲಿ KSRTC ಬಸ್ ಮೇಲೆ ಕಲ್ಲು ತೂರಾಟ: ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಗೃಹ ಸಚಿವ ಸೂಚನೆ
ಗಡಿ ಜಿಲ್ಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ (border) ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ KSRTC ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಮಹಾರಾಷ್ಟ್ರ ಬಸ್ಗಳನ್ನು ತಡೆದು ಪ್ರತಿಭಟನೆ ಮಾಡಲಾಗಿದೆ. ಈ ಎಲ್ಲ ಅಹಿತಕರ ಘಟನೆಗಳ ಕುರಿತಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದು, ಶಾಂತಿ ಕಾಪಾಡಲು ತೆಗೆದುಕೊಂಡ ಕ್ರಮ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರವೇ ಎರಡು ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಮಾಡುವುದಾಗಿ ಹೇಳಿದರು.
ಶರದ್ ಪವಾರ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಪವಾರ್ ಗಡಿ ವಿವಾದ ಇಟ್ಟುಕೊಂಡೇ ರಾಜಕೀಯ ಮಾಡಿದ್ದಾರೆ. ಬೆಳಗಾವಿ ಬಗ್ಗೆ ಮೊದಲಿನಿಂದಲೂ ಶರದ್ ಪವಾರ್ಗೆ ಸೆಳೆತವಿದೆ. ಈ ಹಿಂದೆಯೂ ಅದು ಕೈಗೂಡಿಲ್ಲ, ಈಗಲೂ ಕೈಗೂಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ಮಾಡಿದರು. ನಿಪ್ಪಾಣಿ, ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲಿ ಎಂದು ಶರತ್ ಪವಾರ್ ಕೇಳಿದ್ದರು. ರಾಜ್ಯದ ಒಂದಿಂಚೂ ಭೂಮಿಯನ್ನು ಮಾಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ. ಬಹುದಿನಗಳ ಗಡಿ ವಿಚಾರ ಈಗ ಸುಪ್ರೀಂಕೋರ್ಟ್ ಮುಂದಿದೆ. ನಮ್ಮ ರಾಜ್ಯ ಸರ್ಕಾರ ಹಿರಿಯ ವಕೀಲರಿಗೆ ಜವಾಬ್ದಾರಿ ವಹಿಸಿದೆ. ಗಡಿ ವಿಚಾರವಾಗಿ ಸರ್ವಪಕ್ಷದ ಸಭೆಯಲ್ಲೂ ಸಹ ಕರೆಯಲಾಗಿದೆ. ರಾಜ್ಯದ ನೆಲ, ಜನ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿ
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಈ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದು, ಮುಂದಿನ ಚುನಾವಣೆಗೆ ಮಹಾರಾಷ್ಟ್ರದವರಿಗೆ ಗಡಿ ಕ್ಯಾತೆ ಬೇಕು. ಬಿಜೆಪಿಯವರಿಗೆ ಜನರ ಬಳಿ ಹೋಗಲು ವಿಷಯ, ಸರಕು ಇಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದರು. ಜನರ ನೆಮ್ಮದಿ ಕೆಡಿಸಿ ಧರ್ಮ ವಿಚಾರ ಇಟ್ಕೊಂಡು ಹೋಗ್ತೀರಾ? ಗೋಡಂಬಿ, ಬಾದಾಮಿ ಕೊಟ್ಟು ಕಳಿಸಲು ಸರ್ವಪಕ್ಷ ಸಭೆ ಯಾಕೆ ಎಂದು ಪ್ರಶ್ನಿಸಿದರು. ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅಲ್ಲಿ ಈ ಬಗ್ಗೆ ಮಾತಾಡಿ. ಸರ್ವಪಕ್ಷಗಳ ಸಭೆ ಕರೆದು ಏನು ಮಾಡುತ್ತೀರಿ. ಬೆಳಗಾವಿ ಮಹಾರಾಷ್ಟ್ರದಲ್ಲಿ ಇದ್ದರೇನು, ಕರ್ನಾಟಕದಲ್ಲಿ ಇದ್ದರೇನು? ನಾವೆಲ್ಲರೂ ಭಾರತೀಯರು ಎನ್ನುತ್ತೀರಲ್ಲವೇ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಹೊರಟಿದ್ದೀರಲ್ಲ ಇದನ್ನು ಹೇಳಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Sat, 26 November 22