ಮಸೀದಿಗಳಿಗೆ ಧ್ವನಿವರ್ಧಕ ಅನುಮತಿ ಕೊಟ್ಟಿರೋದು ಸಹಿಸಿಕೊಳ್ಳೋಕೆ ಆಗುತ್ತಿಲ್ಲ: ಮುತಾಲಿಕ್ ವಿರುದ್ಧ ಅಬ್ದುಲ್ ರಜಾಕ್ ಆಕ್ರೋಶ
ಮುತಾಲಿಕ್ ಬಿಜೆಪಿ ಟಿಕೆಟ್ ಕೊಡುವವರೆಗೂ ಇಂತಹ ಅಭಿಯಾನಗಳು ಮುಂದುವರಿಯುತ್ತೆ. ಟಿಕೆಟ್ ಕೊಟ್ಟ ಮೇಲೆ ಮುತಾಲಿಕ್ ಸುಮ್ಮನಾಗುತ್ತಾರೆ. ಅವರ ಹೇಳಿಕೆಯಲ್ಲಿ ಯಾವುದೇ ಲಾಜಿಕ್ ಇಲ್ಲ.
ಬೆಂಗಳೂರು: ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ (loudspeakers) ಅನುಮತಿ ಕೊಟ್ಟಿರೋದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಅದಕ್ಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಮುಸ್ಲಿಂ ಚಿಂತಕ ಅಬ್ದುಲ್ ರಜಾಕ್ ಮುತಾಲಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುತಾಲಿಕ್ ಬಿಜೆಪಿ ಟಿಕೆಟ್ ಕೊಡುವವರೆಗೂ ಇಂತಹ ಅಭಿಯಾನಗಳು ಮುಂದುವರಿಯುತ್ತೆ. ಟಿಕೆಟ್ ಕೊಟ್ಟ ಮೇಲೆ ಮುತಾಲಿಕ್ ಸುಮ್ಮನಾಗುತ್ತಾರೆ. ಅವರ ಹೇಳಿಕೆಯಲ್ಲಿ ಯಾವುದೇ ಲಾಜಿಕ್ ಇಲ್ಲ. ಅವರು ಎಷ್ಟೇ ಅಭಿಯಾನ ಮಾಡಿದರು ಅದೆಲ್ಲ ವ್ಯರ್ಥ. ಹಿಂದೂ ಸಂಘಟನೆಗಳ ಅಭಿಯಾನದಿಂದ ಮುಸಲ್ಮಾನರಿಗೆ ಲಾಭವಾಗಿದೆ. ನಾವು ಸರ್ಕಾರ, ಸುಪ್ರೀಂ ಕೋರ್ಟ್ ಆದೇಶದನ್ವಯ ಮಸೀದಿಗಳಲ್ಲಿ ಆಜಾನ್ ಕೂಗಲಾಗುತ್ತಿದೆ. ಮಸೀದಿಗಳಲ್ಲಿ ಕಡಿಮೆ ಡಿಸೆಬಲ್ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಾಯ್ಕಾಟ್ ಅಭಿಯಾನದಿಂದ ಮುಸ್ಲಿಂಮರಿಗೆ ವ್ಯಾಪಾರ ಹೆಚ್ಚಾಗಿದೆ:
ಇನ್ನು ಹಲಾಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಜನರು ಮುಂಚೆ ಯಾವ್ದೊ ಒಂದು ವಸ್ತು ಅಂತ ಖರೀದಿ ಮಾಡುತ್ತಿದ್ದರು. ಆದರೆ ಈಗ ಪ್ರತಿಯೊಂದು ಖರೀದಿಯನ್ನ ಇದು ಹಲಾಲ್ ಉತ್ಪನ್ನನಾ ಅಂತ ಪರಿಶೀಲಿಸಿ ಖರೀದಿ ಮಾಡುತ್ತಿದ್ದಾರೆ. ಹಂದಿ ಮತ್ತು ದನದ ಕೊಬ್ಬಿನ ಮಿಶ್ರಣ ಇಲ್ಲದ ಉತ್ಪನ್ನವೇ ಹಲಾಲ್. ನನ್ನ ಎಷ್ಟೋ ಹಿಂದೂ ಸ್ನೇಹಿತರು ಹಲಾಲ್ ಉತ್ಪನ್ನವನ್ನೇ ಖರೀದಿ ಮಾಡುತ್ತಿದ್ದಾರೆ. ಇವರ ಅಭಿಯಾನಗಳು ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ. ಮುಂದುವರೆಸಿಕೊಂಡು ಹೋಗೊಲ್ಲ, ಜನಾನೂ ತಲೆ ಕೆಡಿಸಿಕೊಳ್ಳೊಲ್ಲ. ಪ್ರಮೋದ್ ಮುತಾಲಿಕ್ಗೆ ವಯಸ್ಸಾಗಿದೆ ಏನು ಮಾಡ್ಬೇಕು ಅಂತ ಗೊತ್ತಾಗುತ್ತಿಲ್ಲ. ಇವರ ಬಾಯ್ಕಾಟ್ ಅಭಿಯಾನದಿಂದ ಕಳೆದ 2 ವರ್ಷ ಆಗದ ವ್ಯಾಪಾರ ಈಗ ಮುಸ್ಲಿಂಮರಿಗೆ ಹೆಚ್ಚಾಗಿದೆ. ಹಿಂದೂ ಸಂಘಟನೆಗಳ ಅಭಿಯಾನಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಅಬ್ದುಲ್ ರಜಾಕ್ ಹೇಳಿದರು.
ಮೈಕ್ ಬಳಕೆ ಅನುಮತಿ ಹಿಂಪಡೆಯುವಂತೆ ಆಗ್ರಹ: ಪ್ರಮೋದ್ ಮುತಾಲಿಕ್
ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಿದ ರಾಜ್ಯ ಸರ್ಕಾರದ ನಡೆ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮಸೀದಿಗಳಿಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಬೆಂಗಳೂರಿನಲ್ಲಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 17,850 ಧ್ವನಿ ವರ್ಧಕಗಳಿಗೆ ಅನುಮತಿ ನೀಡಲಾಗಿದೆ. 3 ಸಾವಿರ ದೇವಸ್ಥಾನಗಳಿಗೆ, 1,400 ಚರ್ಚ್ಗಳಿಗೆ ಹಾಗೂ 10 ಸಾವಿರ ಮಸೀದಿಗಳಲ್ಲಿ ಮೈಕ್ ಬಳಕೆಗೆ ಅನುಮತಿ ನೀಡಿದ್ದು, ಈಗ ಶಬ್ದ ಮಾಲಿನ್ಯ ಆಗ್ತಿರೋದು ಮಸೀದಿಗಳಿಂದ. ಮಸೀದಿಗಳಿಗೆ ಯಾವ ಆಧಾರದಲ್ಲಿ ಅನುಮತಿ ನೀಡಿದ್ದೀರಿ? ಮಸೀದಿಗಳಿಗೆ ನೀಡಿದ ಮೈಕ್ ಬಳಕೆ ಅನುಮತಿ ಹಿಂಪಡೆಯಿರಿ ಎಂದು ಆಗ್ರಹಿಸಿದರು.
ಮಸೀದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ, ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡಿದೆ. ಇದರಿಂದ ಆಸ್ಪತ್ರೆ, ವಿದ್ಯಾರ್ಥಿಗಳಿಗೆ, ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿ ಆಗುತ್ತಿದೆ. ಮಸೀದಿಗಳ ಮುಂಭಾಗ ಅಗತ್ಯ ಪೊಲೀಸ್ ಇಲಾಖೆಯಿಂದ ಒಂದು ಪಡೆ ರಚಿಸಿ, ಕಾನೂನುಬಾಹಿರ ಮಸೀದಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ತೆಗೆದುಕೊಳ್ಳಿ. ಬೂಟಾಟಿಕೆ, ನಾಟಕ, ಕಣ್ಣೊರೆಸುವ ತಂತ್ರಗಾರಿಕೆ ಬೇಡವೆಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Wed, 26 October 22