ಆನೇಕಲ್: 3 ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ 13 ವರ್ಷದ ಗಂಡು ಚಿರತೆ ಗುಂಡೇಟಿಗೆ ಬಲಿ
ಕಳೆದ 3 ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಚಿರತೆ ಇಂದು ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಸೆರೆ ಸಿಕ್ಕಿತ್ತು. ಆದರೆ ಚಿರತೆ ಸೆರೆ ಹಿಡಿಯುವಾಗ ಅರಣ್ಯ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದು, ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ಬೆಂಗಳೂರು, ನವೆಂಬರ್ 01: ಕಳೆದ 3 ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಚಿರತೆ (leopard) ಇಂದು ಬೊಮ್ಮನಹಳ್ಳಿಯ ಕೈಗಾರಿಕಾ ಪ್ರದೇಶದ ಕೂಡ್ಲುಗೇಟ್ನ ಕೃಷ್ಣಾರೆಡ್ಡಿಪಾಳ್ಯದ ಪಾಳುಬಿದ್ದ ಕಟ್ಟಡದಲ್ಲಿ ಸೆರೆ ಸಿಕ್ಕಿತ್ತು. ಆದರೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಚಿರತೆ ಮೃತಪಟ್ಟಿದೆ. ಚಿರತೆ ಸೆರೆ ಹಿಡಿಯುವಾಗ ಅರಣ್ಯ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದು, ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಸಿಸಿಎಫ್ ಲಿಂಗರಾಜು ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ಚಿರತೆ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸುತ್ತಿದ್ದು, ಸಿಸಿಎಫ್ ಲಿಂಗರಾಜು, ಡಿಆರ್ಎಫ್ ರವೀಂದ್ರಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸಿಸಿಎಫ್ ಲಿಂಗರಾಜು ಹೇಳಿದಿಷ್ಟು
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಸಿಎಫ್ ಲಿಂಗರಾಜು ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಕ್ಕೆ ಗುಂಡು ಹಾರಿಸಲಾಗಿದೆ. ಬೆಳಗ್ಗೆಯಿಂದ ಸಿಬ್ಬಂದಿ ಮೇಲೆ 2 ಸಲ ಚಿರತೆ ದಾಳಿ ನಡೆಸಿತ್ತು. ಚಿರತೆ ದಾಳಿಯಿಂದ ಸಿಬ್ಬಂದಿಗೆ ಮಾರಣಾಂತಿಕ ಗಾಯವಾಗಿತ್ತು ಎಂದಿದ್ದಾರೆ.
ಇಂದು ಬೆಳಗ್ಗೆಯಿಂದ ಕೂಡ್ಲುಗೇಟ್ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನ ಅರಣ್ಯ ಇಲಾಖೆ ಟೀಂಗೆ ಮೈಸೂರಿನ ಸ್ಪೆಷಲ್ ಟೀಂ ಕೈಜೋಡಿಸಿತ್ತು. ಚಿರತೆ ಸೆರೆಗೆ ಮೈಸೂರಿನಿಂದ ಆಗಮಿಸಿದ DFC ಸೌರಭ್ ಕುಮಾರ್ ನೇತೃತ್ವದ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗೆ ಬಲ ತುಂಬಿತ್ತು. 10 ಮಂದಿ ತಜ್ಞರನ್ನ ಒಳಗೊಂಡಿರುವ ಸ್ಪೆಷಲ್ ಟೀಮ್ ಕಾರ್ಯಾಚರಣೆ ಮಾಡಿತ್ತು.
ಇದನ್ನೂ ಓದಿ: ಅರಿವಳಿಕೆ ನೀಡಲು ಹೋದ ವೈದ್ಯ, ಶಾರ್ಪ್ ಶೂಟರ್ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ
ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲುಗೇಟ್ ಸುತ್ತ ಮತ್ತಲಿನ ಜನರು ಆತಂಕಗೊಂಡಿದ್ದರು. ಇಲ್ಲಿನ ಪ್ರತಿಷ್ಠಿತ cadenza ಅಪಾರ್ಟ್ ಮೆಂಟ್‌ನಲ್ಲಿ ಚಿರತೆ ಪ್ರತ್ಯಕ್ಷದಿಂದಾಗ ನಾಗರಿಕರು ಮತ್ತಷ್ಟು ಭೀತಿಗೊಂಡಿದ್ದರು. ಬೆಳಗ್ಗೆ ಹೊತ್ತಿನಲ್ಲಿ ಕಾಣಿಸಿಕೊಳ್ಳದ ಚಿರತೆ ರಾತ್ರಿಯಾದಂತೆ ಪ್ರತ್ಯಕ್ಷವಾಗುತ್ತಿತ್ತು. ಕತ್ತಲಲ್ಲಿ ರಾಜಾರೋಷವಾಗಿ ಓಡಾಡುವ ಚಿರತೆ ಈಗ ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು.
ಬೊಮ್ಮನಹಳ್ಳಿಯ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲು ಭಾಗದ ನಾಗರಿಕರು ಈಗ ಭಯದಲ್ಲಿಯೇ ದಿನದೂಡಬೇಕಾದ ಪರಿಸ್ಥಿತಿ ಬಂದಿತ್ತು. ಚಿರತೆಗೆ ಹೆದರಿ ಕತ್ತಲಾಗುತ್ತಿದ್ದಂತೆ ಈ ಪ್ರದೇಶದ ಜನರು ಮನೆ ಸೇರುತ್ತಿದ್ದಾರೆ. ರಾತ್ರಿಯಾದರೆ ಸಾಕು ಹಿರಿಯರು ಮತ್ತು ಮಕ್ಕಳು ಹೊರ ಬರಲು ಹೆದರುತ್ತಿದ್ದಾರೆ. ಆತಂಕ ಸೃಷ್ಟಿಸಿರುವ ಚಿರತೆಯನ್ನು ಕೂಡಲೇ ಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನ ಕೆಲ ಪ್ರದೇಶಗಳ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ
ಚಿರತೆಯು ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಅಲರ್ಟ್ ಆಗಿದ್ದರು. ಸಿಂಗಸಂದ್ರ , ಬೊಮ್ಮನಹಳ್ಳಿ, HSR ಲೇಔಟ್, BTM ಲೇಔಟ್ ಸುತ್ತಮುತ್ತ ಗಸ್ತು ತಿರುಗುತ್ತಿದ್ದರು. ಎಚ್ಚರದಿಂದ ಇರುವಂತೆ ಜನರಿಗೆ ಮನವಿ ಮಾಡುತ್ತಿದ್ದರು.
ಸಿಬ್ಬಂದಿ ಮೇಲೆಯೇ ಅಟ್ಯಾಕ್ ಮಾಡಿ ಪರಾರಿಯಾಗಿದ್ದ ಚಿರತೆ
ಬೆಳಗ್ಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗಿದ್ದ ವೈದ್ಯ ಕಿರಣ್ ಮೇಲೆ ಚಿರತೆ ದಾಳಿ ಕುತ್ತಿಗೆಗೆ ಪರಚಿ ಎಸ್ಕೇಪ್ ಆಗಿತ್ತು. ಇನ್ನು ಇದೇ ವೇಳೆ ಚಿರತೆ, ಲೆಪರ್ಡ್ ಟಾಸ್ಕ್ಫೋರ್ಸ್ ಶಾರ್ಪ್ ಶೂಟರ್ ಧನ್ರಾಜ್ ಮೇಲೆ ಅಟ್ಯಾಕ್ ಮಾಡಿತ್ತು. ಇದರಿಂದ ಅವರಿಗೆ ಕಾಲು ಮತ್ತು ಭುಜಕ್ಕೆ ಗಾಯವಾಗಿತ್ತು. ಹಾಗೇ ಕಾರ್ಯಚರಣೆಯಲ್ಲಿರುವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಮೇಲೂ ದಾಳಿ ಮಾಡಿದ್ದು, ಅವರ ಕಾಲಿಗೆ ಗಾಯವಾಗಿತ್ತು. ಇದೀಗ ಹಲವು ತಂತ್ರ ರಣತಂತ್ರಗಳ ಮೂಲಕ ಅರಣ್ಯ ಸಿಬ್ಬಂದಿ ಕಿಲಾಡಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಆದರೆ ಇದೀಗ ಗುಂಡೇಟಿಗೆ ಬಲಿ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.