150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ದಾಖಲೆ ಫೋರ್ಜರಿ: ಅಧಿಕಾರಿಗಳ ವಿರುದ್ಧ FIR ದಾಖಲಾದ್ರೂ ಕ್ರಮವಿಲ್ಲ

ಬೆಂಗಳೂರಿನ ಆನೇಕಲ್‌ನಲ್ಲಿ 150 ಕೋಟಿ ರೂ. ಮೌಲ್ಯದ ಸರ್ಕಾರಿ ಗೋಮಾಳ ಭೂ ದಾಖಲೆ ತಿದ್ದುಪಡಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಬಂಧನವಾಗದಿರುವುದನ್ನು ಖಂಡಿಸಿ ಸಾರ್ವಜನಿಕರು ಮತ್ತು ವಕೀಲರು ಪ್ರತಿಭಟನೆ ಮಾಡಿದರು. 16 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾದರೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ದಾಖಲೆ ಫೋರ್ಜರಿ: ಅಧಿಕಾರಿಗಳ ವಿರುದ್ಧ FIR ದಾಖಲಾದ್ರೂ ಕ್ರಮವಿಲ್ಲ
ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
Edited By:

Updated on: Dec 19, 2025 | 8:10 PM

ಆನೇಕಲ್, ಡಿಸೆಂಬರ್​​ 19: 150 ಕೋಟಿ ರೂ. ಮೌಲ್ಯದ ಸರ್ಕಾರಿ ಗೋಮಾಳ ಜಮೀನು (land) ದಾಖಲೆಗಳನ್ನು ತಿದ್ದಿದ್ದ ಪ್ರಕರಣಕ್ಕೆ ಸಂಬಂಧ ಆರೋಪಿತ ಅಧಿಕಾರಿಗಳು ಮತ್ತು ಅವರ ಜೊತೆ ಶಾಮೀಲಾಗಿರುವ ಭೂಗಳ್ಳರನ್ನು ತಿಂಗಳಾದರೂ ಬಂಧಿಸಿಲ್ಲ ಎಂದು ವಕೀಲರು ಸೇರಿದಂತೆ ಸಾರ್ವಜನಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ (protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಚೇರಿ ಮುಂಭಾಗ ಸಂವಿಧಾನ ರಕ್ಷಣಾ ವೇದಿಕೆ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಆನೇಕಲ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್​​ ತಿಪ್ಪೇಸ್ವಾಮಿ ಮತ್ತು ಆನೇಕಲ್ ತಹಶಿಲ್ದಾರ್ ಶಶಿಧರ್ ಮಾಡ್ಯಾಳ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕನಸಿನ ಮನೆ ಕನಸು ಕಂಡವರಿಗೆ ಶಾಕ್: ಉಳ್ಳವರಿಗಾಗಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ

ಆನೇಕಲ್ ತಾಲ್ಲೂಕು ಕಛೇರಿ ಅಭಿಲೇಖಾಲಯದಲ್ಲಿ ಸರ್ಕಾರಿ ಗೋಮಾಳದ ದಾಖಲೆಗಳನ್ನು ತಿದ್ದಿದ್ದ ಆರೋಪದಡಿ ಆನೇಕಲ್ ತಾಲ್ಲೂಕು ಕಚೇರಿಯ 16 ಮಂದಿ ಅಧಿಕಾರಿಗಳ ವಿರುದ್ಧ ನವೆಂಬರ್​​​ 28ರಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯವರೆಗೆ ಆನೇಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ.

ಎಚ್ಚರಿಕೆ ನೀಡಿದ ಹೋರಾಟಗಾರರು

ಜಿಲ್ಲಾಧಿಕಾರಿಗಳ ಸೂಚನೆಯಂತೆ ಕೇವಲ ಅಧಿಕಾರ ವಿರುದ್ದ ಮಾತ್ರ ತಹಶಿಲ್ದಾರ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಕೋಟ್ಯಂತರ ರೂ ಮೌಲ್ಯದ ಸರ್ಕಾರಿ ಜಮೀನು ಕಬಳಿಸಿದ ಭೂಗಳ್ಳರ ವಿರುದ್ಧ ಎಫ್​​ಐಆರ್​ ದಾಖಲಿಸಿಲ್ಲ. ಹಾಗಾಗಿ ಕೂಡಲೇ ಭೂಗಳ್ಳರು ಸಹಿತ ಆರೋಪಿತ ಅಧಿಕಾರಿಗಳನ್ನು ಬಂಧಿಸಬೇಕು. ಇಲ್ಲವಾದರೆ ಆನೇಕಲ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರ, ವಕೀಲ ಪುರುಷೋತ್ತಮ್​​​​ ಅವರು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಕಚೇರಿ ಖಾಲಿ ಖಾಲಿ

ಇನ್ನು ಎಫ್​​ಐಆರ್​ ದಾಖಲಾದ ಬಳಿಕ ತಾಲ್ಲೂಕು ಕಚೇರಿ ಖಾಲಿ ಖಾಲಿಯಾಗಿದೆ. ಬಹುತೇಕ ಅಧಿಕಾರಿಗಳು ಬಂಧನ ಭೀತಿ ಹಿನ್ನಲೆ ಪರಾರಿಯಾಗಿದ್ದಾರೆ. ತಹಶಿಲ್ದಾರ್ ಶಶಿಧರ್ ಮಾಡ್ಯಾಳ್ ಸಾಮಾನ್ಯ ಜನರಿಗೆ ಕಚೇರಿ ಸಮಯದಲ್ಲಿ ಸಿಗುತ್ತಿಲ್ಲ. ಸಂಜೆ ವೇಳೆ ಬಂದು ತಡರಾತ್ರಿವರೆಗೆ ದಾಖಲೆಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ತಹಶಿಲ್ದಾರ್ ಕಚೇರಿಯಲ್ಲಿ ಹಣವಂತರ ಕೆಲಸ ಮಾತ್ರ ನಡೆಯುತ್ತಿದೆ. ಜನಸಾಮಾನ್ಯರು ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ಆನೇಕಲ್ ತಹಶಿಲ್ದಾರ್ ವಿರುದ್ಧ ವಕೀಲ ಆನಂದ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​​ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು?

ಒಟ್ಟಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ರಕ್ಷಣೆ ಮಾಡಬೇಕಿದ್ದ ಸರ್ಕಾರಿ ಅಧಿಕಾರಿಗಳು ಪ್ರಭಾವಿಗಳ ಜೊತೆ ಶಾಮೀಲಾಗಿ ನೂರಾರು ಕೋಟಿ ರೂ ಮೌಲ್ಯದ ಆಸ್ತಿ ಭೂಗಳ್ಳರ ಪಾಲಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಭೂಗಳ್ಳರ ವಿರುದ್ಧ ಕ್ರಮ ಜರುಗಿಸುತ್ತಾರಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.