ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಆನೇಕಲ್ ತಾಲೂಕಿನ ಬಸವನಪುರ ಗೇಟ್​ನಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದಾರೆ.

ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ ಆಕಸ್ಮಿಕ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಬಿಎಂಟಿಸಿ ಬಸ್​ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 24, 2023 | 7:12 PM

ಆನೇಕಲ್: ಚಲಿಸುತ್ತಿದ್ದ ಬಿಎಂಟಿಸಿ ಬಸ್​ನಲ್ಲಿ (BMTC bus) ಆಕಸ್ಮಿಕ ಬೆಂಕಿ (fire) ಕಾಣಿಸಿಕೊಂಡಿರುವಂತಹ ಘಟನೆ ಆನೇಕಲ್ ತಾಲೂಕಿನ ಬಸವನಪುರ ಗೇಟ್​ನಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದಾರೆ. ತಾಂತ್ರಿಕದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಕೆಎ 57, ಎಫ್​ 0569 ಸಂಖ್ಯೆ ಬಿಎಂಟಿಸಿ ಬಸ್​ ಬೆಂಕಿಗಾಹುತಿ ಆಗಿದ್ದು, ಮೆಜೆಸ್ಟಿಕ್-ಜಿಗಣಿ ನಡುವೆ ಸಂಚರಿಸುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ರಸ್ತೆ ಬದಿ ನಿಂತಿದ್ದ 3 ಖಾಸಗಿ ಬಸ್​ಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಆರ್.ವಿ.ಇಂಜಿನಿಯರಿಂಗ್​ ಕಾಲೇಜು ಬಳಿ ಇತ್ತೀಚೆಗೆ ನಡೆದಿತ್ತು. ಎಸ್​ಆರ್​ಎಸ್​ ಟ್ರಾವೆಲ್ಸ್​ಗೆ ಸೇರಿದ 3 ಬಸ್​ಗಳು ಹೊತ್ತಿ ಉರಿದಿದ್ದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್ ಸಜೀವ ದಹನ

ಮಾರ್ಚ್​ 10ರಂದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಕಂಡಕ್ಟರ್​ ಸಜೀವ ದಹನವಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಉದ್ಭವಿಸಿವೆ. ಬಸ್​​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಅನುಮಾನಗಳು ಹುಟ್ಟುಕೊಂಡಿದ್ದು, ಪೊಲೀಸರು​ ತನಿಖೆ ಚುರುಕುಗೊಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಬಸ್​ ಡ್ರೈವರ್ ಪ್ರಕಾಶ್​ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈಗಾಗಲೇ ಎರಡು ಬಾರಿ ನೊಟೀಸ್ ನೀಡಿ ವೇಳೆ ವಿಚಾರಣೆ ಮಾಡಿದ್ದು, ತನಿಖೆ ವೇಳೆ ಪೊಲೀಸರಿಗೆ ಹಲವು ರೀತಿಯ ಅನುಮಾನಗಳು ಮೂಡಿಸಿವೆ.

ಇದನ್ನೂ ಓದಿ: ಕೊಟ್ಟಿಗೆಹಾರ: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ, ಸುಟ್ಟು ಕರಕಲಾದ ಬಸ್

ಖಾಸಗಿ ಬಸ್‌ನಲ್ಲಿ ಬೆಂಕಿ

ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಸ್ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೆಟ್ರೋಲ್ ಬಂಕ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದುರಂತ ತಪ್ಪಿತ್ತು.

ಇದನ್ನೂ ಓದಿ: ಬಿಎಂಟಿಸಿ ಬಸ್​ಗೆ ಬೆಂಕಿ ಬಿದ್ದು ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್, ಬೆಂಕಿ ಹೊತ್ತಿಕೊಳ್ಳುವ ಮುನ್ನ ಹಣ ವರ್ಗಾವಣೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇತ್ತೀಚೆಗೆ ಘಟನೆ ನಡೆದಿತ್ತು. ಬಸ್ಸಲ್ಲಿ ಬೆಂಕಿ ಕಾಣಿಸಿಕೊಂಡಾಗ ಕೂಡಲೇ ಪೆಟ್ರೋಲ್ ಬಂಕ್ ನೌಕರ ಎಚ್ಚೆತ್ತುಕೊಂಡಿದ್ದರು. ಪೆಟ್ರೋಲ್ ಬಂಕ್​ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಡೀಸೆಲ್ ಇತ್ತು. ನೌಕರನ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ ಎಂದು ತಿಳಿದುಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:04 pm, Mon, 24 April 23