ಬೆಂಗಳೂರು, ಡಿ.14: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ (BMTC Accident) ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ಪ್ರೋ ಕಬಡಿ ನೋಡಲು ಹೋಗುತಿದ್ದ ದಂಪತಿಗೆ ಯಮನಂತೆ ಬಂದ ಬಿಎಂಟಿಸಿ ಮಹಿಳೆಯ ಪ್ರಾಣ (Death) ತೆಗೆದುಕೊಂಡಿದೆ. ಸೀಮಾ ಮೃತ ಗೃಹಿಣಿ. ನಿನ್ನೆ ಸಂಜೆ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ಮಡಿವಾಳ ಫ್ಲೈಓವರ್ ಮೇಲೆ ಘಟನೆ ನಡೆದಿದೆ. BMTC ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಅಪಘಾತದ ಬಳಿಕ ಬಸ್ ಬಿಟ್ಟು ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದಾರೆ.
ಕಳೆದ ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿ ಸಿಂಗಸಂಧ್ರದಲ್ಲಿ ವಾಸವಾಗಿದ್ದರು. ನಿನ್ನೆ ಸಂಜೆ ಪ್ರೋ ಕಬಡಿ ಪಂದ್ಯ ವೀಕ್ಷಿಸಲು ತಮ್ಮ ಪುಟ್ಟ ಮಗುವಿನ ಜೊತೆ ಬೈಕ್ನಲ್ಲಿ ಹೋಗುವಾಗ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ಪರಿಣಾಮ ಮೂವರು ಕೆಳಗೆ ಬಿದ್ದಿದ್ದಾರೆ. ಬಿಎಂಟಿಸಿ ಬಸ್ನ ಚಕ್ರದಡಿ ಸಿಲುಕಿದ ಸೀಮಾ(21) ಹೆಲ್ಮೆಟ್ ಧರಿಸಿದ್ದರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮಗು ಗಾನವಿ, ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: ಉಡುಪಿ: ದತ್ತು ಮಗಳು ನಾಪತ್ತೆ, ಮನನೊಂದ ರಂಗಭೂಮಿ ಕಲಾವಿದ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು
ಇನ್ನು ಘಟನೆ ಸಂಬಂಧ ಮಾತನಾಡಿದ ಮೃತಳ ಪತಿ ಗುರುಮೂರ್ತಿ, ಸಂಜೆ ಪ್ರೋ ಕಬಡಿ ನಡೆಯುತಿತ್ತು. ಪತ್ನಿ ಮಗು ಕರೆದುಕೊಂಡು ಹೊಗ್ತಿದ್ದೆ. ಈ ವೇಳೆ ವೇಗವಾಗಿ ಬಸ್ ತಿರುಗಿಸಿ ಡಿಕ್ಕಿ ಹೊಡೆದಿದ್ದಾರೆ. ಪತ್ನಿ ಸಾವು ಸಂಭವಿಸುತಿದ್ದಂತೆ ಚಾಲಕ, ಕಂಡಕ್ಟರ್ ಇಬ್ಬರು ಪರಾರಿಯಾಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಘಟನೆ ಬಳಿಕ ಯಾವ ಒಬ್ಬ ಬಿಎಂಟಿಸಿ ಅಧಿಕಾರಿಯೂ ಬಂದಿಲ್ಲ. ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಶ್ರೀಕಂಠಪುರ ತಾಂಡಾದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಗುರುಮೂರ್ತಿ ಕೆಲಸ ಮಾಡುತ್ತಿದ್ದಾರೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಗೃಹಿಣಿ ಸೀಮಾ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ