ಲೋಕಸಭೆ ಸದನದೊಳಗೆ ನುಗ್ಗಿ ಹಂಗಾಮ ಮಾಡಿದ ಮನೋರಂಜನ್ಗೆ ಇದೆ ಬೆಂಗಳೂರಿನ ನಂಟು, ಈತ ಓದಿದ್ದು ಬೆಂಗಳೂರಿನ BITಯಲ್ಲಿ
ವಿವಿಪುರಂ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರೋಪಿ ಮನೋರಂಜನ್ ವಿಧ್ಯಾಭ್ಯಾಸ ಮಾಡಿದ್ದಾನೆ. ಈ ಬಗ್ಗೆ ಮಾತನಾಡಿರುವ ಕಾಲೇಜು ಪ್ರಿನ್ಸಿಪಾಲ್ ಅಶ್ವಥ್ ಅವರು, ಮನೋರಂಜನ್ 2018ರ ಬ್ಯಾಚ್ ಔಟ್. ಈತ ಡ್ರಾಪ್ ಔಟ್ ಸ್ಟೂಡೆಂಟ್. ನಮ್ಮಲ್ಲಿ ಬಿಇ ಪದವಿ ಪೂರ್ಣ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು, ಡಿ.14: 7 ಸುತ್ತಿನ ಕೋಟೆಯಂತಹ ಸಂಸತ್ ಭವನಕ್ಕೆ ನುಗ್ಗಿ ಲೋಕಸಭೆ ಕಲಾಪದ ಬಾವಿಗಿಳಿದು ಬಣ್ಣ ಬಣ್ಣದ ಸ್ಮೋಕ್ (Parliament Attack) ಸಿಡಿಸಿ ಅಟ್ಟಹಾಸ ಮೆರೆದಿದ್ದ ಆರೋಪಿ ಮನೋರಂಜನ್ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆರೋಪಿ ಮನೋರಂಜನ್ಗೆ ಬೆಂಗಳೂರಿನ ಜೊತೆ ಅವಿನಾಭಾವ ಸಂಬಂಧವಿದೆ. ಈತನ ಬಹುತೇಕ ಸ್ನೇಹಿತರು ಬೆಂಗಳೂರಿನವರಾಗಿದ್ದು (Bengaluru) ತನಿಖೆ ನಡೆಯುತ್ತಿದೆ.
ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದ ಮನೋರಂಜನ್ ಶಿಕ್ಷಣಕ್ಕಾಗಿಯೇ ಮೈಸೂರಿನಲ್ಲಿ ನೆಲೆಸಿದ್ದ. ಮೈಸೂರಿನ ಮರಿಮಲ್ಲಪ್ಪದಲ್ಲಿ ಹೈಸ್ಕೂಲ್ ಓದಿದ್ದು, ಸೇಂಟ್ ಜೋಸೆಫ್‍ನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ. ಬಳಿಕ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಡ್ರಾಪ್ ಔಟ್ ವಿದ್ಯಾರ್ಥಿಯಾಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
ವಿವಿಪುರಂ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆರೋಪಿ ಮನೋರಂಜನ್ ವಿಧ್ಯಾಭ್ಯಾಸ ಮಾಡಿದ್ದಾನೆ. ಈ ಬಗ್ಗೆ ಮಾತನಾಡಿರುವ ಕಾಲೇಜು ಪ್ರಿನ್ಸಿಪಾಲ್ ಅಶ್ವಥ್ ಅವರು, ಮನೋರಂಜನ್ 2018ರ ಬ್ಯಾಚ್ ಔಟ್. ಈತ ಡ್ರಾಪ್ ಔಟ್ ಸ್ಟೂಡೆಂಟ್. ನಮ್ಮಲ್ಲಿ ಬಿಇ ಪದವಿ ಪೂರ್ಣ ಮಾಡಿಲ್ಲ. ಡ್ರಾಪ್ ಔಟ್ ಮಾಡಿ ಹೋಗಿದ್ದಾರೆ. ವಿಧ್ಯಾರ್ಥಿಯ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿಲ್ಲ. ಎಲ್ಲ ಮಾಹಿತಿ ಪಡೆಯುತ್ತಿದ್ದೇವೆ. ಮನೋರಂಜನ್ ಕಾಲೇಜು ವರ್ತನೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸಹ ಉಪನ್ಯಾಸಕರ ಬಳಿಯೂ ಮಾಹಿತಿ ಕೇಳದ್ದೀವಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಸದನದೊಳಗೆ ನುಗ್ಗಿದ ಮೈಸೂರಿನ ಮನೋರಂಜನ್ ಯಾವ ರೀತಿಯ ಪುಸ್ತಕಗಳನ್ನ ಓದುತ್ತಿದ್ದ ಗೊತ್ತಾ?
ಮನೋರಂಜನ್ ಬಳಿ ಇತ್ತು ಪುಸ್ತಕ ಭಂಡಾರ
ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ. ಕೆಲವೊಂದು ಭೂಗತ ಜಗತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟದ ಕಥನಗಳು ಪತ್ತೆಯಾಗಿವೆ.
ಚೆ ಗುವೇರಾ ಅವರ ಗೆರಿಲ್ಲಾ ವಾರ್‌ಫೇರ್, ಸನ್ ತ್ಸು ಅವರ ದಿ ಆರ್ಟ್ ಆಫ್ ವಾರ್, ವಂದನಾ ಶಿವ ಅವರ ವಾಟರ್ ವಾರ್ಸ್, ಚಾರ್ಲ್ಸ್ ಡಿಕನ್ಸ್ ಅವರ ಆಲಿವರ್ ಟ್ವಿಸ್ಟ್, ಚಾರ್ಲ್ಸ್ ಡಿಕನ್ಸ್ ಅವರ ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್, ವಂದನಾ ಶಿವ ಅವರ ಹಸಿರು ಕ್ರಾಂತಿಯ ಹಿಂಸೆ, ಲುವೊ ಗುವಾನ್‌ಜಾಂಗ್‌ನ ರೋಮ್ಯಾನ್ಸ್ ಆಫ್ ದಿ ತ್ರೀ ಕಿಂಗ್‌ಡಮ್ಸ್, ದಿ ಗ್ರೇಟೆಸ್ಟ್ ಶೋ ಆನ್ ಅರ್ಥ್: ದಿ ಎವಿಡೆನ್ಸ್ ಫಾರ್ ಎವಲ್ಯೂಷನ್ ಬೈ ರಿಚರ್ಡ್ ಡಾಕಿನ್ಸ್, ಹುಸೇನ್ ಜೈದಿ ಅವರ ಡೋಂಗ್ರಿ ಟು ದುಬೈ , ಹಮೀಶ್ ಮೆಕ್‌ಡೊನಾಲ್ಡ್ ಬರೆದ ಅಂಬಾನಿ ಮತ್ತು ಸನ್ಸ್ , ಸುಭಾಸ್ ಚಂದ್ರ ಬೋಸ್ ಅವರ ದಿ ಇಂಡಿಯನ್ ಸ್ಟ್ರಗಲ್, ಪೀಟರ್ ವಾರ್ಡ್ ಫೇ ಬರೆದ ದಿ ಫಾರ್ಗಾಟನ್ ಆರ್ಮಿ ಎನ್ನುವ ಇಂಗ್ಲೀಷ್ ಪುಸ್ತಕಗಳು ದೊರೆತಿವೆ. ಇನ್ನು ದಾದಾಗಿರಿಯ ದಿನಗಳು, ಎದೆಗಾರಿಕೆ ಎನ್ನುವ ಕನ್ನಡ ಪುಸ್ತಕಗಳು ಸಿಕ್ಕಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ