ಲೋಕಸಭೆ ಸದನದೊಳಗೆ ನುಗ್ಗಿದ ಮೈಸೂರಿನ ಮನೋರಂಜನ್ ಯಾವ ರೀತಿಯ ಪುಸ್ತಕಗಳನ್ನ ಓದುತ್ತಿದ್ದ ಗೊತ್ತಾ?
Security Breach In Loksabha: ಮೈಸೂರು ಮೂಲದ ಮನೋರಂಜನ್ ಎನ್ನುವ ಯುವಕ ಲೋಕಸಭಾ ಸದನದೊಳಗೆ ನುಗ್ಗಿದ್ದು, ಒಂದು ಕ್ಷಣ ಎಲ್ಲರನ್ನು ಆತಂಕಕ್ಕೀಡು ಮಾಡಿದ್ದಾನೆ. ಮನೋರಂಜನ್ ದೆಹಲಿ ಈ ಕೃತ್ಯ ಮಾಡುತ್ತಿದ್ದಂತೆಯೇ ಇತ್ತ ಪೊಲೀಸರು ಮೈಸೂರಿನ ನಿವಾಸಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಹಲವು ವಿವಿಧ ಪಸ್ತಕಗಳು ಪತ್ತೆಯಾಗಿವೆ.
ಮೈಸೂರು, (ಡಿಸೆಂಬರ್ 13): ಲೋಕಸಭೆಗೆ ಕಿಡಿಗೇಡಿಗಳು ನುಗ್ಗಿದ ಪ್ರಕರಣದ ತನಿಖೆ ತೀವ್ರಗೊಂಡಿದ್ದು. ಪೊಲೀಸರು ಆರೋಪಿಗಳ ಜನ್ಮ ಜಲಾಡುತ್ತಿದ್ದಾರೆ. ಈ ಪೈಕಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಸದನದೊಳಕ್ಕೆ ಜಿಗಿದು ಕಲರ್ ಸ್ಮೋಕ್ ಸ್ಪೇ ಮಾಡಿ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. ಆರೋಪಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಇನ್ನು ಮನೋರಂಜನ್ ಮೈಸೂರು ಮೂಲದವನಾಗಿದ್ದು, ಘಟನೆ ನಡೆಯುತ್ತಿದ್ದಂತೆಯೇ ಮೈಸೂರಿನ ಪೊಲಿಸರು ಮನೋರಂಜನ್ ನಿವಾಸಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ.
ಮೈಸೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ಎಸಿಪಿ ಗಜೇಂದ್ರ ಪ್ರಸಾದ್, ವಿಜಯನಗರ ಪಿಐ ಸುರೇಶ್ ಭೇಟಿ ನೀಡಿ ಮನೋರಂಜನ್ ತಂದೆ ದೇವರಾಜೇಗೌಡ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಮನೆ ಪರಿಶೀಲನೆ ನಡೆಸಿದ್ದು, ಈ ವೇಳೆ ಮನೋರಂಜನ್ ಮನೆಯಲ್ಲಿ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ. ಕೆಲವೊಂದು ಭೂಗತ ಜಗತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟದ ಕಥನಗಳು ಪತ್ತೆಯಾಗಿವೆ.
ಇದನ್ನೂ ಓದಿ: ಲೋಕಸಭೆಗೆ ನುಗ್ಗಿದ ಮೈಸೂರಿನ ಮನೋರಂಜನ್ ಯಾರು? ಈತನಿಗೆ ರಾಜಕೀಯ ನಂಟು ಇತ್ತಾ? ಇಲ್ಲಿದೆ ವಿವರ
ಮನೋರಂಜನ್ ಮನೆಯಲ್ಲಿ ಸಿಕ್ಕ ಪುಸ್ತಕಗಳು
ಮನೋರಂಜನ್ ಅವರ ಮನೆಯಲ್ಲಿ ದೊರೆತ ಕೆಲವು ಪುಸ್ತಕಗಳೆಂದರೆ – ಚೆ ಗುವೇರಾ ಅವರ ಗೆರಿಲ್ಲಾ ವಾರ್‌ಫೇರ್, ಸನ್ ತ್ಸು ಅವರ ದಿ ಆರ್ಟ್ ಆಫ್ ವಾರ್, ವಂದನಾ ಶಿವ ಅವರ ವಾಟರ್ ವಾರ್ಸ್, ಚಾರ್ಲ್ಸ್ ಡಿಕನ್ಸ್ ಅವರ ಆಲಿವರ್ ಟ್ವಿಸ್ಟ್, ಚಾರ್ಲ್ಸ್ ಡಿಕನ್ಸ್ ಅವರ ಗ್ರೇಟ್ ಎಕ್ಸ್‌ಪೆಕ್ಟೇಷನ್ಸ್, ವಂದನಾ ಶಿವ ಅವರ ಹಸಿರು ಕ್ರಾಂತಿಯ ಹಿಂಸೆ, ಲುವೊ ಗುವಾನ್‌ಜಾಂಗ್‌ನ ರೋಮ್ಯಾನ್ಸ್ ಆಫ್ ದಿ ತ್ರೀ ಕಿಂಗ್‌ಡಮ್ಸ್, ದಿ ಗ್ರೇಟೆಸ್ಟ್ ಶೋ ಆನ್ ಅರ್ಥ್: ದಿ ಎವಿಡೆನ್ಸ್ ಫಾರ್ ಎವಲ್ಯೂಷನ್ ಬೈ ರಿಚರ್ಡ್ ಡಾಕಿನ್ಸ್, ಹುಸೇನ್ ಜೈದಿ ಅವರ ಡೋಂಗ್ರಿ ಟು ದುಬೈ , ಹಮೀಶ್ ಮೆಕ್‌ಡೊನಾಲ್ಡ್ ಬರೆದ ಅಂಬಾನಿ ಮತ್ತು ಸನ್ಸ್ , ಸುಭಾಸ್ ಚಂದ್ರ ಬೋಸ್ ಅವರ ದಿ ಇಂಡಿಯನ್ ಸ್ಟ್ರಗಲ್, ಪೀಟರ್ ವಾರ್ಡ್ ಫೇ ಬರೆದ ದಿ ಫಾರ್ಗಾಟನ್ ಆರ್ಮಿ ಎನ್ನುವ ಇಂಗ್ಲೀಷ್ ಪುಸ್ತಕಗಳು ದೊರೆತಿವೆ. ಇನ್ನು ದಾದಾಗಿರಿಯ ದಿನಗಳು, ಎದೆಗಾರಿಕೆ ಎನ್ನುವ ಕನ್ನಡ ಪುಸ್ತಕಗಳು ಸಹ ಮನೋರಂಜನೆ ಮನೆಯಲ್ಲಿವೆ.
ಈ ರೀತಿಯ ಪುಸ್ತಕಗಳು ಸಿಕ್ಕಿರುವುದು ನೋಡಿದರೆ ಮನೋರಂಜನ್ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಹೊಂದಿದ್ದ ಎನ್ನುವುದು ಗೊತ್ತಾಗುತ್ತಿದೆ.
ಮನೋರಂಜನ್ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದ್ದಾನೆ. ಆದ್ರೆ, ಅವರು ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದು, ಮೈಸೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ PU ಓದಿರುವ ಮನೋರಂಜನ್, ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾನೆ.