
ಬೆಂಗಳೂರು, ಜುಲೈ 28: ತ್ವರಿತ ಗತಿಯಲ್ಲಿನ ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ಇ-ಖಾತಾ (E Khata) ವಿತರಣೆ ಮಾಡಲು ಬಿಬಿಎಂಪಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲೂ ಆಯ್ಕೆ ನೀಡಿದೆ. ಆದಾಗ್ಯೂ, ಬಿಬಿಎಂಪಿಯ ಕಚೇರಿಗಳಿಗೆ ಲಗ್ಗೆ ಇಡುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ, ಜನರು ದಯಮಾಡಿ ಆನ್ಲೈನ್ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬೇಕು ಎಂದು ಬಿಬಿಎಂಪಿ (BBMP) ಆಯುಕ್ತ ಮಹೇಶ್ವರ ರಾವ್ ಎಂ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಅವರ ಎಕ್ಸ್ ಸಂದೇಶಕ್ಕೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ಹೊಸ ಹೊಸ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ.
ಬಿಬಿಎಂಪಿ ಕಚೇರಿಗಳಿಗೆ ಅಲೆಯುವ ಬದಲು ಎಲ್ಲ ಬೆಂಗಳೂರಿಗರು ಆನ್ಲೈನ್ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಲು ಮನವಿ ಮಾಡುತ್ತಿದ್ದೇವೆ. ಯಾವುದೇ ರೀತಿಯ ನೆರವು ಬೇಕಿದ್ದಲ್ಲಿ ಇ-ಖಾತಾ ಸಹಾಯವಾಣಿ ಸಂಖ್ಯೆ 94806 83695 ಕರೆ ಮಾಡಬಹುದಾಗಿದೆ ಎಂದು ಅವರು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
All Bengalureans are requested to apply for their Final E-Khata online and refrain from visiting BBMP offices. For any support, please contact the E-Khata helpline at 94806 83695.https://t.co/IC17d7mh3I#BBMP #BBMPCares #bbmpchiefcommissioner
— Maheshwar Rao.M, IAS (@BBMPCOMM) July 28, 2025
ಆಯುಕ್ತರ ಟ್ವೀಟ್ಗೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನರವರು ಕೂಡ, ಆನ್ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆಯಲ್ಲಿನ ಲೋಪಗಳು, ಸಮಸ್ಯೆಗಳು ಮತ್ತು ಅರ್ಜಿ ಸಲ್ಲಿಸಿದ ನಂತರವೂ ಯಾವುದೇ ಕ್ರಮ ಆಗದಿರುವ ಬಗ್ಗೆ ದೂರಿದ್ದಾರೆ. ಇನ್ನು ಅನೇಕರು ಅವರವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ನಮ್ಮ ಪ್ರಾಪರ್ಟಿ ಬಿಬಿಎಂಪಿ ವೆಬ್ಸೈಟ್ನಲ್ಲಿ ಕಾಣಿಸುವುದೇ ಇಲ್ಲ. ಅದನ್ನು ಬಿಬಿಎಂಪಿ ತಿಡಿಪಡಿ ಮಾಡಿಸಬೇಕು. ಇಲ್ಲದಿದ್ದರೆ ನಾವು ಹೇಗೆ e-khatka apply ಮಾಡುವುದು? ಸ್ವಲ್ಪ ಬಿಡಿಸಿ ಹೇಳಿ ನೋಡೋಣ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಅನಧಿಕೃತ ಶುಲ್ಕವನ್ನು ಪಾವತಿಸದ ಕಾರಣ ನನ್ನ ಅರ್ಜಿಗಳನ್ನು ಸಿಂಗಸಂದ್ರ ಆರ್‌ಒ ಮತ್ತು ಕೇಸ್‌ವರ್ಕರ್ ಹಲವು ಬಾರಿ ತಿರಸ್ಕರಿಸಿದ್ದಾರೆ. ಈ ಅನುಭವ ತೃಪ್ತಿಕರವಾಗಿಲ್ಲ ಮತ್ತು ನಾನು ಮತ್ತೆ ಅರ್ಜಿ ಸಲ್ಲಿಸಲು ಹಿಂಜರಿಯುತ್ತಿದ್ದೇನೆ ಎಂದು ಸುಹೇಲ್ ಖಾನ್ ಎಂಬ ಹ್ಯಾಂಡಲ್ನಿಂದ ಸ್ಕ್ರೀನ್ಶಾಟ್ಗಳ ಸಮೇತ ಪ್ರತಿಕ್ರಿಯಿಸಲಾಗಿದೆ.
ಗ್ರೇಟರ್ ಬೆಂಗಳೂರು ಖಾತಾ ಬಗ್ಗೆ ಏನು ಹೇಳುತ್ತೀರಿ? ಅದಕ್ಕೆ ನಾವು ಮತ್ತೆ ಹಣ ಪಾವತಿ ಮಾಡಬೇಕೇ? ಮೊದಲು ನಮಗೆ ಪಂಚಾಯತ್ ಖಾತಾ ವಿತರಿಸಲಾಗಿತ್ತು. ನಂತರ ಪುರಸಭೆ ಖಾತಾ ನೀಡಲಾಯಿತು. ಅದರ ಬಳಿಕ ಬಿಬಿಎಂಪಿ ಇ-ಖಾತಾ ಆಯಿತು. ನಾಳೆ ಗ್ರೇಟರ್ ಬೆಂಗಳೂರು ಖಾತಾ ಪಡೆಯಬೇಕಾಗುತ್ತದೆಯೇ ಎಂದು ವಕೀಲ ಕಾಂತರಾಜ್ ತವನೆ ಎಂಬವರು ಪ್ರಶ್ನಿಸಿದ್ದಾರೆ.
What about the Greater Bangalore Khatha? Are we expected to pay again?
We were first issued a Panchayat and then Purasabha Khatha. Later we got, a BBMP Khatha. Now, you’re talking about a BBMP E-Khatha. Tomorrow, will there be yet another new “Greater Bangalore Khatha”?— Adv. (Dr.) Kantaraj Tavane (@KantarajT) July 28, 2025
‘‘ಫೆಬ್ರವರಿ 6 ರಂದು ನಾವು ಇ-ಖಾತಾಗೆ ಅರ್ಜಿ ಸಲ್ಲಿಸಿದ್ದೇವೆ. ನಮ್ಮ ಆಸ್ತಿ ಕೆಂಗೇರಿಯ 159ನೇ ವಾರ್ಡ್ನಲ್ಲಿದೆ. ಅರ್ಜಿ ಸಲ್ಲಿಸಿ 6 ತಿಂಗಳಾದರೂ ನಮಗೆ ಖಾತಾ ದೊರೆತಿಲ್ಲ. ನಿಮ್ಮ ಇ-ಮೇಲ್ ಐಡಿಗೂ ಹಲವು ಬಾರಿ ಸಂದೇಶ ಕಳುಹಿಸಿದ್ದೇವೆ. ನೀವು ಅದನ್ನು ಡಿಸಿಯವರಿಗೆ ಫಾರ್ವರ್ಡ್ ಮಾಡುತ್ತೀರಿ ಬಿಟ್ಟರೆ ಮತ್ತಿನ್ನೇನೂ ಆಗಿಲ್ಲ’’ ಎಂದು ಮೊಯಿನ್ ಅಹ್ಮದ್ ಎಂಬವರು ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
‘‘ನೀವು ಭರವಸೆ ನೀಡಿದಂತೆ ಇ-ಖಾತಾ ನೀಡಲು ನಿಮ್ಮ ಸಿಬ್ಬಂದಿಗೆ ಸೂಚನೆ ನೀಡಬಹುದೇ? ಫೆಬ್ರವರಿ ತಿಂಗಳಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ, ಇನ್ನೂ ತಾತ್ಕಾಲಿಕ ಖಾತಾ ಅಥವಾ ಅಂತಿಮ ಖಾತಾ ನೀಡಲಾಗಿಲ್ಲ. 160 ದಿನಗಳಿಗಿಂತ ಹೆಚ್ಚು ಕಾಲ ಕಾಯುತ್ತಿದ್ದೇವೆ ಮತ್ತು ಯಾವುದೇ ಭರವಸೆ ಇಲ್ಲ’’ ಎಂದು ಭಾಸ್ಕರ್ ನಾಯ್ಕ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.