ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ನೇತೃತ್ವದಲ್ಲಿ ಇಂದು (ಜ.04) ವಿಕಾಸಸೌಧದಲ್ಲಿ ಗೃಹ ಇಲಾಖೆ ಸಭೆ ನಡೆಯಿತು. ಹಿರಿಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಆರಗ ಜ್ಞಾನೇಂದ್ರ 1 ವರ್ಷದ ನಿರ್ವಹಣೆ ಬಗ್ಗೆ ಅವಲೋಕನ ಮಾಡಿದರು. ಸಭೆಯಲ್ಲಿ ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್, ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಮೋಹನ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಗೃಹ ಇಲಾಖೆ ಸಭೆಯಲ್ಲಿ 1 ವರ್ಷದ ನಿರ್ವಹಣೆ ಬಗ್ಗೆ ಅವಲೋಕನ ಮಾಡಲಾಗಿದೆ. ಇಲಾಖೆಗೆ ಸಂಬಂಧಿಸಿದ ವಿಧೇಯಕಗಳ ಅನುಷ್ಠಾನದ ಬಗ್ಗೆ, ಗೃಹ ಇಲಾಖೆಗೆ ಅಗತ್ಯವಿರುವ ಹೊಸ ವಾಹನ ಖರೀದಿ ಹಾಗೂ ಡ್ರೋನ್ ನಿರ್ವಹಣೆ ತರಬೇತಿ ಬಗ್ಗೆ ಕೂಡ ಚರ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
2022ರಲ್ಲಿ ಗೃಹ ಇಲಾಖೆಗೆ ಬಹಳ ಸವಾಲುಗಳು ಎದುರಾಗಿದ್ದು, ಗೃಹ ಸಚಿವನಾಗಿ ಪೊಲೀಸರ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆ. ಚುನಾವಣಾ ವರ್ಷದಲ್ಲಿ ವಿಶೇಷ ವ್ಯವಸ್ಥೆ ಬಗ್ಗೆ ಚರ್ಚಿಸಲಾಗಿದೆ. ಸ್ಯಾಂಟ್ರೋ ರವಿ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಸ್ತಾಪ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಗಮನಿಸಿ ವರದಿ ತರಿಸಿಕೊಳ್ಳುತ್ತೇನೆ. ಈ ಕುರಿತು ದೂರು ನೀಡಿದರೆ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದರು.
ಲಿಂಬಾವಳಿ ಹೆಸರು ಬರೆದಿಟ್ಟು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಕೇಸ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ 6 ಜನರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ತಪ್ಪಿತಸ್ಥರು ಯಾರೇ ಇದ್ರೂ ಅವರನ್ನು ಪೊಲೀಸರು ಬಂಧಿಸುತ್ತಾರೆ. ತನಿಖೆಯಲ್ಲಿ ನಿರಪರಾಧಿ ಇದ್ದರೆ ಅವರನ್ನು ಬಂಧಿಸುವುದಿಲ್ಲ. ಯಾರು ಏನೋ ಬರೆದು ಇಟ್ಟಿದ್ದಾರೆ ಎಂದು ಬಂಧಿಸಲು ಆಗಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಯಾವುದೋ ವ್ಯವಹಾರಕ್ಕೆ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನ ಪತ್ನಿಯೂ ಕೂಡ ಪತಿ ಬಗ್ಗೆ ದೂರು ನೀಡಿದ್ದಾರೆಂಬ ಮಾಹಿತಿಯಿದೆ. ತನಿಖೆ ಹಂತದಲ್ಲಿ ನಾನು ಏನು ಹೇಳಿದರೂ ತಪ್ಪಾಗುತ್ತದೆ ಎಂದರು.
ಚಿತ್ರದುರ್ಗದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದಲ್ಲಿ ಅತ್ಯಾಚಾರ ಆಗಿಲ್ಲವೆಂದು ಜಿಲ್ಲಾಸ್ಪತ್ರೆ ವೈದ್ಯರಿಂದ ವರದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರ ವರದಿ ಬಗ್ಗೆ ಮಾಹಿತಿ ಇಲ್ಲ. ಅಂತೆ ಕಂತೆ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮುರುಘಾಶ್ರೀ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ. ಪ್ರಕರಣದ ತನಿಖೆ ವೇಳೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 pm, Wed, 4 January 23