ಸುಮಾರು 40 ಐಟಿ-ಬಿಟಿ ಕಂಪನಿಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ: ಸಚಿವ ಆರ್.ಅಶೋಕ್
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಕಟ್ಟಡಗಳನ್ನು ತೆರವು ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಲ್ಲಿ ಕಂದಾಯ ಸಚಿವ ಆರ್.ಅಶೋಕ್ ಟಿವಿ9ಗೆ ಹೇಳಿದ್ದಾರೆ.
ಬೆಂಗಳೂರು: ರಾಜಕಾಲುವೆಯನ್ನು (Rajkaluve) ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಕಟ್ಟಡಗಳನ್ನು ತೆರವು ಮಾಡುವಂತೆ ಬಿಬಿಎಂಪಿ (BBMP) ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಲ್ಲಿ (Bengaluru) ಕಂದಾಯ ಸಚಿವ ಆರ್.ಅಶೋಕ್ (R Ashok) ಟಿವಿ9ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ರಾಜಕಾಲುವೆಗಳ ಒತ್ತುವರಿ ತೆರವಿಗೆ ಸೂಚಿಸಿದ್ದಾರೆ. ಯಾವುದೇ ತಾರತಮ್ಯ ತೋರದೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದರು.
ಮಳೆ ಬಗ್ಗೆ ಐಟಿ-ಬಿಟಿ ಕಂಪನಿಗಳು ದೊಡ್ಡದಾಗಿ ಮಾತಾಡಿವೆ. ಸುಮಾರು 40 ಐಟಿ-ಬಿಟಿ ಕಂಪನಿಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ. ಕಂಪನಿಗಳಿಂದ ಒತ್ತುವರಿ ಆಗಿರುವ ಕಾಲುವೆಗಳ ತೆರವಿಗೂ ಸೂಚನೆ ನೀಡಲಾಗಿದೆ. ಇನ್ಫೋಸಿಸ್ ಮಾತ್ರ ಸರಿಯಾಗಿ ಮಾತಾಡಿದ್ದಾರೆ. ಉಳಿದವರು ನೆಗೆಟಿವ್ ಮಾತಾಡಿದ್ದಾರೆ. ಒಡೆದರೆ ಯಾರು ಮಾಡಿದ್ದಾರೆ, ಏನು ಮಾಡಿದ್ದಾರೆ ಅಂತಾ ಗೊತ್ತಾಗುತ್ತದೆ. ತೆರವು ಕಾರ್ಯಕ್ಕೆ ತಡೆಕೋರಿ ಕೆಲವರು ಕೋರ್ಟ್ಗೆ ಹೋಗಿದ್ದಾರೆ. ನಾವು ಕೂಡ ತೆರವು ಕಾರ್ಯಕ್ಕೆ ತಡೆ ನೀಡದಂತೆ ಮನವಿ ಕೋರ್ಟಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಇಂದು ಕಾರ್ಯಾಚರಣೆ ವೇಳೆ ಬಿಬಿಎಂಪಿ ಅಧಿಕಾರಿಗಳು ವಾಪಸ್ ಬಂದಿರುವ ವಿಚಾರವಾಗಿ ಮಾತನಾಡಿದ ಅವರು ಕೆಲವು ಸಲ ಹೀಗೆ ಆಗುತ್ತಾ ಇರುತ್ತದೆ. ಕೋರ್ಟ್ ಆದೇಶಗಳು ಎಲ್ಲಾ ಇರುವಾಗ ಹೀಗೆ ಆಗುತ್ತದೆ. ಸರ್ಕಾರದ ವತಿಯಿಂದ ಯಾವುದನ್ನೂ ಸ್ಥಗಿತಗೊಳಿಸಲು ಅವಕಾಶ ಇಲ್ಲ. ಒಡೆಯಬೇಕು ಅನ್ನೋದೇ ನಮ್ಮ ಉದ್ದೇಶ ಎಂದರು.
ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ ನಿಲ್ಲೋದಿಲ್ಲ
ರಾಜಕಾಲುವೆ ಒತ್ತುವರಿ ತೆರವು ಕಾರ್ಯದ ಕುರಿತು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಯಾರು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಸಹಜ ಕಾಲುವೆಗೆ ಯಾರೇ ಅಡ್ಡಿ ಬಂದರೂ ತೆರವು ಸೂಚನೆ ನೀಡಿದ್ದೇವೆ. ಅದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ. ಎಲ್ಲರಿಗೂ ಕೂಡ ಮಳೆಯಿಂದ ತೊಂದರೆ ಆಗಿದೆ. ತೆರವು ಮಾಡುವುದು ಪ್ರಾರಂಭ ಆಗಿದೆ ನಿಲ್ಲೋದಿಲ್ಲ ಎಂದು ಖಡಖ್ ಎಚ್ಚರಿಕೆ ನೀಡಿದರು.
ಹಲವಾರು ಪ್ರಕರಣ ಕೋರ್ಟ್ ನಲ್ಲಿ ಈಗಾಗಲೇ ಇದೆ. ಕೋರ್ಟ್ ಕೂಡ ಒತ್ತುವರಿ ತೆರವು ಮಾಡಿ ಅಂತಲೇ ಸೂಚನೆ ನೀಡಿದೆ. ಈ ಬಾರಿ ನಾವು ನಿಲ್ಲಿಸೋದಿಲ್ಲ, ತೆರವು ಮಾಡಿಯೇ ಮಾಡುತ್ತೇವೆ. ಮಳೆಯಿಂದಾಗಿ ಐಟಿಬಿಟಿಯವರಿಗೂ ತೊಂದರೆ ಆಗಿದೆ, ರಸ್ತೆಯಲ್ಲಿ ಓಡಾಡುವವರಿಗೂ ತೊಂದರೆ ಆಗಿದೆ, ಸಾಮಾನ್ಯರಿಗೂ ತೊಂದರೆ ಆಗಿದೆ. ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಬಸವರಾಜ ದಡೆಸಗೂರು ಆಡಿಯೋ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಆಡಿಯೋ ವೀಡಿಯೋ ಬಗ್ಗೆ ಗೊತ್ತಿಲ್ಲ ಆದರೆ ಆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಹಂಗೇನಾದರೂ ಇದ್ದರೇ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಮಳೆಯಿಂದ ಅನೇಕ ಪ್ರದೇಶಗಳಲ್ಲಿ ಹಾನಿಯಾಗಿದೆ: ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ
ಬೆಂಗಳೂರಲ್ಲಿ ಮಳೆಯಿಂದ ಅನೇಕ ಪ್ರದೇಶಗಳಲ್ಲಿ ಹಾನಿಯಾಗಿದ್ದರಿಂದ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದ್ದೇವೆ ಎಂದು ವಿಧಾನಸೌಧದಲ್ಲಿ ಬೊಮ್ಮನಹಳ್ಳಿ ಶಾಸಕ, ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಎಷ್ಟೇ ಪ್ರಭಾವಿಗಳಿದರೂ ಒತ್ತುವರಿ ತೆರವು ನಿಲ್ಲಿಸುವುದಿಲ್ಲ. ಒತ್ತುವರಿ ತೆರವು ಬಗ್ಗೆ ಸಿಎಂ ಬೊಮ್ಮಾಯಿ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬೊಮ್ಮಾಯಿಗೆ ಬೆಂಗಳೂರಿನ ಬಗ್ಗೆ ಪ್ರೀತಿ ಇದೆ. ನಾವೆಲ್ಲ ಒತ್ತಡ ಹಾಕಿದಾಗ ಹಣ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಮಳೆ ಸಂಬಂಧ ನಾಳೆ ಶಾಸಕಾಂಗ ಸಭೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ನವರಿಗೆ ಮಾತ್ರ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ. ಮಳೆಯ ಸಂದರ್ಭದಲ್ಲಿ ರಾಜಕಾರಣ ಮಾಡೋದು ಬೇಡ. ಬೆಂಗಳೂರಿನ ಬಗ್ಗೆ ನಾವೇ ಕೆಟ್ಟದಾಗಿ ಮಾತಾಡೋದು ಬೇಡ. ನಾವೇ ಬೆಂಗಳೂರು ನಗರದ ಬ್ರ್ಯಾಂಡ್ ಕೆಡಿಸುವುದು ಬೇಡ. ಬೆಂಗಳೂರಿನ ಬಗ್ಗೆ ಬಿಜೆಪಿ ಶಾಸಕರಿಗೆ ಮಾತ್ರ ಜವಾಬ್ದಾರಿನಾ? ಕಾಂಗ್ರೆಸ್ ಶಾಸಕರಿಗೆ ಜವಾಬ್ದಾರಿ ಇಲ್ವಾ? ಎಂದು ಪ್ರಶ್ನಿಸಿದರು.
ಎಲ್ಲರೂ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡಬೇಕು. ಹಿಂದೆಯೇ ಕೂಡ ಗೊಂದಲಗಳ ಲಾಭ ಪಡೆದುಕೊಂಡಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾಲುವೆ ಇರುವ ಜಾಗದಲ್ಲಿ ಇರಬೇಕು. ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಬೇಕು. ಬೆಂಗಳೂರಿಗೆ ಪ್ರತ್ಯೇಕ ಉಸ್ತುವಾರಿ ಸಚಿವರು ಇದ್ದರೂ ಕೂಡ ಮಳೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Mon, 12 September 22