ಬೆಂಗಳೂರು, ಅ.16: ಮಳವಳ್ಳಿಯಲ್ಲಿ ಇಂದು(ಬುಧವಾರ) ಬೆಂಗಳೂರಿಗೆ ಕಾವೇರಿ 5ನೇ ಹಂತದ ನೀರು ಯೋಜನೆ ಉದ್ಘಾಟನೆ ಕುರಿತು ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್(R Ashoka), ‘ನಾನೇ ಎಲ್ಲಾ ಮಾಡಿಸಿದ್ದು ಎಂದು ನಿನ್ನೆ ಡಿಸಿಎಂ ಜಂಭ ಕೊಚ್ಚಿ ಕೊಂಡಿದ್ದಾರೆ. ಅವರು ಏನೇ ಹೇಳಿದರೂ ದಾಖಲೆಗಳು ಮಾತಾಡುತ್ತವೆ. ಯೋಜನೆ ಪ್ರಾರಂಭ ಆದಾಗ ಬಿಜೆಪಿ ಸರ್ಕಾರ ಇತ್ತು. ಅದರ 80% ಪ್ರತಿಶತ ಕೆಲಸವನ್ನು ನಾವೇ ಮಾಡಿದ್ದೇವೆ. ಇವರು ಬಂದು ಈಗ ಒಂದು ವರ್ಷ ಆಗಿದೆ. ದೇವರನ್ನು ಕೂರಿಸಿ ಹೋಮ ಹವನ ಮಾಡಿದ್ದು ನಾವು, ಮಂಗಳಾರತಿ ಸಮಯದಲ್ಲಿ ಇವರು ಬಂದು ನಮ್ಮದು ಎಂದು ಹೇಳುತ್ತಿದ್ದಾರೆ ಎಂದು ಅಶೋಕ ಟಾಂಗ್ ಕೊಟ್ಟಿದ್ದಾರೆ.
ಇನ್ನು ಬ್ರಾಂಡ್ ಬೆಂಗಳೂರು ಬಗ್ಗೆ ಹೇಳಿ ಬಿಡುಗಡೆ ಮಾಡಿದ್ದ ಹಣ ವಾಪಸ್ ಪಡೆದಿದ್ದಾರೆ. ತಕ್ಷಣ ಹಣ ಬಿಡುಗಡೆ ಮಾಡಬೇಕು. ಜೊತೆಗೆ ಮಳೆ ಸಮಸ್ಯೆ ಪರಿಹಾರ ಮಾಡಬೇಕು. ‘ನಾವು ಯಾವತ್ತಿಗೂ ಬ್ರಾಂಡ್ ಬೆಂಗಳೂರು ಅಂತಾ ಹೇಳಿಲ್ಲ. ನಾವು ಕೆಂಪೇಗೌಡರ ಬೆಂಗಳೂರು ಹೆಸರಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಬ್ರಾಂಡ್ ಬೆಂಗಳೂರು ಹೋಗಿ ಬ್ಯಾಂಡ್ ಬೆಂಗಳೂರು ಆಗಿದೆ.
ಸುಮ್ಮನೆ ಬ್ಯಾಂಡ್ ಅಷ್ಟೇ, ಮಾಡುತ್ತೇವೆ ಮಾಡುತ್ತೇವೆ ಎಂದು ಸೌಂಡ್ ಅಷ್ಟೇ. ಈಗ ಇರುವ ಕಾಂಟ್ರಾಕ್ಟರ್ಗಳಿಗೆ ಎರಡು ವರ್ಷಗಳಿಂದ ಬಿಲ್ ಬಿಡುಗಡೆ ಮಾಡಿಲ್ಲ. ಯಾವ ಕಾಂಟ್ರಾಕ್ಟರ್ಗಳು ಕೂಡ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ:5ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ; ಬೆಂಗಳೂರಿನ ಈ ನಗರಗಳಿಗೆ ಭಾರಿ ಅನುಕೂಲ
ವಿಪಕ್ಷ ನಾಯಕ ಅಶೋಕ್ಗೆ ಸಾಮಾನ್ಯ ಜ್ಞಾನ ಇಲ್ಲ ಎಂಬ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ ವಿಚಾರ, ‘ಹೌದು, ಸ್ವಾಮಿ ನಮಗೆ ಜ್ಞಾನ ಇಲ್ಲ, ನಾವು ಸಾಮಾನ್ಯರು. ನೀವು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ಓದಿದವರು ಅಲ್ಲವಾ, ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಯೋಜನೆ ನೀಲನಕ್ಷೆ ಏನು?. ನಾವು ಕೊಟ್ಟಿರುವ ಹಣವನ್ನು ನೀವು ನುಂಗಿ ಹಾಕಿದ್ದೀರಿ. ಮಕ್ಕಳಿಗೆ ಚಂದ ಮಾಮನ ಕಥೆಯಂತೆ ಬ್ರಾಂಡ್ ಬೆಂಗಳೂರು ಪರಿಸ್ಥಿತಿ ಆಗಿದೆ. ದೇಶದ ಮಾನವನನ್ನು ವಿದೇಶದಲ್ಲಿ ತೆಗೆದಿದ್ದು ಮಾನ್ಯ ರಾಹುಲ್ ಗಾಂಧಿಯವರು. ನಮ್ಮ ಸರ್ಕಾರ ಇದ್ದಾಗ ಬೆಂಗಳೂರನ್ನು ಗಾರ್ಬೇಜ್ ಸಿಟಿ ಎಂದು ಬರೆಸಿದವರು ಯಾರಪ್ಪಾ?. ನಮ್ಮ ಬೆಂಗಳೂರು ಅಂತಾ ಅಂದಾಗ ನೀವು ಸಹಕಾರ ಕೊಡಬೇಕಿತ್ತು. ಆಗ ನೀವು ನಮ್ಮ ಮಾನ ಮರ್ಯಾದೆ ಹರಾಜು ಹಾಕಿದಿರಲ್ಲಾ,
ಈಗ ಮಾನ ಹರಾಜು ಅಂತಾ ಹೇಳಲು ನಿಮಗೆ ಏನು ನೈತಿಕತೆ ಇದೆ ಎಂದು ಕಿಡಿಕಾರಿದರು.
ಇದೇ ವೇಳೆ ಉಪಚುನಾವಣೆ ಹಿನ್ನೆಲೆ ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡು ಮೂರು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ಇವತ್ತು ಕೂಡ ಜೆಡಿಎಸ್ ನಾಯಕರ ಜೊತೆ ಚರ್ಚಿಸಿದ್ದೇವೆ. ಮೂರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳು ಸ್ಫರ್ಧೆ ಮಾಡಲಿದ್ದಾರೆ. ಚನ್ನಪಟ್ಟಣದಲ್ಲಿ ನಾನೇ ಎನ್ಡಿಎ ಅಭ್ಯರ್ಥಿ ಎಂಬ ಸಿಪಿವೈ ಹೇಳಿಕೆ, ‘ಕುಮಾರಸ್ವಾಮಿ ಅವರನ್ನೂ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಯೋಗೇಶ್ವರ್ ಅವರೇ ಅಭ್ಯರ್ಥಿ ಆಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಸಂಡೂರಿಗೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನೂ ಕುಮಾರಸ್ವಾಮಿ ಅವರು ತೀರ್ಮಾನ ಮಾಡಬಹುದು.
ಇದನ್ನೂ ಓದಿ:ಕಾವೇರಿ ಆರತಿ ಒಮ್ಮೆ ಪ್ರಾರಂಭಿಸಿದ ಮೇಲೆ ಯಾವುದೇ ಕಾರಣಕ್ಕೂ ನಿಲ್ಲಬಾರದು: ರಾಜ್ಯ ಸಚಿವರಿಗೆ ಗಂಗಾರತಿ ಸಭಾ ಸಲಹೆ
ಟಿಕೆಟ್ ಕೊಡುವ ವಿಚಾರವಾಗಿ ಕುಳಿತು ಚರ್ಚೆ ಮಾಡುತ್ತೇವೆ. ನಾನು, ಅಶ್ವಥ್ ನಾರಾಯಣ್, ಬೊಮ್ಮಾಯಿ ಸೇರಿ ಆರು ಜನರು ದೆಹಲಿಗೆ ಹೋಗಿ ನಮ್ಮ ಅಭಿಪ್ರಾಯವನ್ನು ಕೇಂದ್ರದ ನಾಯಕರಿಗೂ ತಿಳಿಸಿದ್ದೇವೆ. ಹಾಗೂ ಕುಮಾರಸ್ವಾಮಿ ಅವರ ಕಚೇರಿಗೆ ಹೋಗಿಯೂ ತಿಳಿಸಿದ್ದೇವೆ. ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ನ್ಯಾಚುರಲ್ ಆಗಿ ಅದು ಜೆಡಿಎಸ್ ಕ್ಷೇತ್ರ, ಬಿಜೆಪಿಯವರು ಯಾವುದೇ ಪ್ರಯತ್ನ ಮಾಡಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಜೆಡಿಎಸ್ ಕ್ಷೇತ್ರ ಇರುವುದರಿಂದ ಅಭ್ಯರ್ಥಿ ಆಯ್ಕೆ ಬಗ್ಗೆ ಕುಮಾರಸ್ವಾಮಿ ಯವರೇ ನಿರ್ಧಾರ ಮಾಡುತ್ತಾರೆ.
ಇನ್ನು ಮುಡಾ ಅಧ್ಯಕ್ಷ ಮರಿಗೌಡ ರಾಜೀನಾಮೆ ಕುರಿತು ಮಾತನಾಡಿ, ‘ಮೊನ್ನೆ ಸಿಎಂ ಸಿದ್ದರಾಮಯ್ಯ ಸೈಟ್ ವಾಪಸ್ ನೀಡಿದ್ದಾರೆ. ಇಂತಹ ಕೇಸ್ ತನಿಖೆಗೆ ಕೊಡದೇ ಇನ್ಯಾವ ಕೇಸ್ ತನಿಖೆಗೆ ಕೊಡಬೇಕು ಎಂದು ಕೋರ್ಟ್ ತನಿಖೆಗೆ ನೀಡಿದೆ.
ಹಗರಣ ನಡೆಯದೇ ಇಷ್ಟೆಲ್ಲಾ ಆಗುತ್ತಿದೆಯಾ?, ಕಾಂಗ್ರೆಸ್‌ನ ಒಂದು ಗುಂಪು ಇವರ ವಿರುದ್ಧ ಇದೆ. ಹಾಗಾಗಿ ರಾಜೀನಾಮೆ ಕೊಡಿಸಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ