ಬೆಂಗಳೂರು, ಜೂನ್ 26: ಬೆಂಗಳೂರು ಆಟೋ ಮೀಟರ್ ದರ (Auto Meter Rate) ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ (Auto Drivers Association)ಒತ್ತಾಯ ಮಾಡಿದೆ. ಆಟೋ ಚಾಲಕರ ಸಂಘ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದೆ. ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವ ಅಧಿಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಮಿಟಿಗೆ ಮಾತ್ರ ಅವಕಾಶ ಇರುವುದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ.
ಪ್ರತಿ ವರ್ಷ ದರಗಳನ್ನು ಪರಿಷ್ಕರಿಸಿದರೆ, ಆಟೋ ಚಾಲಕರು ಪ್ರಯಾಣಿಕರಿಗೆ ಸೇವೆ ನಿರಾಕರಿಸುವುದನ್ನು ತಪ್ಪಿಸಬಹುದು. ಅಲ್ಲದೆ, ಅಧಿಕ ಶುಲ್ಕ ವಿಧಿಸುವ ದೂರುಗಳನ್ನು ಕಡಿಮೆ ಮಾಡಬಹುದು ಎಂದು ಸಂಘ ಪತ್ರದಲ್ಲಿ ತಿಳಿಸಿದೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಕಾರಣ ಕನಿಷ್ಠ ಆಟೋ ದರವನ್ನು ಕೂಡ ಹೆಚ್ಚಿಸುವಂತೆ ಸಂಘ ಒತ್ತಾಯಿಸಿದೆ. ಈ ಬಗ್ಗೆ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇಂಧನ ಮತ್ತು ಬಿಡಿಭಾಗಗಳ ಬೆಲೆಗಳು ಮತ್ತು ಹಣದುಬ್ಬರದಿಂದ ಸಮಸ್ಯೆ ಎದುರಾಗಿದೆ ಎಂದು ಪತ್ರ ಬರೆಯಲಾಗಿದೆ. ಬೆಂಗಳೂರು ನಗರದಲ್ಲಿ ಆಟೋದರ ಪರಿಷ್ಕರಣೆಯನ್ನು 2021ರ ಡಿಸೆಂಬರ್ 20ರಂದು ಮಾಡಲಾಗಿದೆ. ನಂತರ ಪರಿಷ್ಕರಣೆ ಮಾಡಿಲ್ಲ. ನಗರದಲ್ಲಿ ಆರಂಭದ 2 ಕಿ.ಮೀ.ಗೆ 30 ರೂ. ನಂತರ ಪ್ರತಿ ಹೆಚ್ಚುವರಿ ಕಿ.ಮೀ. 15 ರೂ ದರ ನಿಗದಿಯಾಗಿದೆ. ಈ ದರ 3 ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಈಗ ಮತ್ತೆ 5 ರಿಂದ 10 ರುಪಾಯಿ ಪರಿಷ್ಕರಿಸಲು ಮನವಿ ಮಾಡಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಕನಿಷ್ಠ 30 ರುಪಾಯಿ ಇದ್ದು, ಅದನ್ನು 40 ರುಪಾಯಿ ಮಾಡಬೇಕೆಂದು ಮನವಿ ಮಾಡಲಾಗಿದೆ.
ಈ ಬಗ್ಗೆ ಮಾತಾನಾಡಿದ ಕೆಲವು ಮಂದಿ ಪ್ರಯಾಣಿಕರು, ಉಳಿದ ಎಲ್ಲಾ ದರ ಹೆಚ್ಚಳವಾದರೆ ಆಟೋ ಚಾಲಕರು ಕೂಡ ದರ ಏರಿಕೆ ಮಾಡಲೇಬೇಕಷ್ಟೆ ಎಂದಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿವೆ ತೆರಿಗೆ ಕಟ್ಟದ 7 ಲಕ್ಷ ಆಸ್ತಿಗಳು; ಇ-ಖಾತಾ ಮೂಲಕ ಬಾಕಿ ತೆರಿಗೆ ವಸೂಲಿಗೆ ಪ್ಲಾನ್
ಒಟ್ಟಿನಲ್ಲಿ ಪೆಟ್ರೋಲ್, ಡಿಸೇಲ್, ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಬೆಂಗಳೂರು ಆಟೋ ದರ ಏರಿಕೆಯ ಬರೆಯೂ ಶ್ರೀಸಾಮಾನ್ಯನಿಗೆ ತಟ್ಟುವ ಸಾಧ್ಯತೆ ಇದೆ. ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ