ಬೆಂಗಳೂರು; ಪತ್ನಿಯನ್ನ ತಾನೇ ಕೊಂದು, ದೂರು ನೀಡಿ ನ್ಯಾಯಬೇಕು ಎಂದು ನಾಟಕ ಆಡ್ತಿದ್ದ ಪತಿ ಬಂಧನ

| Updated By: ಆಯೇಷಾ ಬಾನು

Updated on: Aug 29, 2024 | 8:39 AM

ಪತ್ನಿಯನ್ನು ತಾನೇ ಕೊಂದು ಕೊಲೆಯಾಗಿದೆ ಎಂದು ಸುಳ್ಳು ದೂರು ನೀಡಿ ನಾಟಕವಾಡಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನ ಬಂದ ಹಿನ್ನೆಲೆ ಬಾಗಲೂರು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಮೆಹಬೂಬ್ ತನ್ನ ಪತ್ನಿಯನ್ನು ಕೊಲೆ ಮಾಡಿದ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಬೆಂಗಳೂರು; ಪತ್ನಿಯನ್ನ ತಾನೇ ಕೊಂದು, ದೂರು ನೀಡಿ ನ್ಯಾಯಬೇಕು ಎಂದು ನಾಟಕ ಆಡ್ತಿದ್ದ ಪತಿ ಬಂಧನ
ಮುಮ್ತಾಜ್, ಮೆಹಬೂಬ್
Follow us on

ಬೆಂಗಳೂರು, ಆಗಸ್ಟ್​.29: ಅನುಮಾನದ ಭೂತವನ್ನು ತಲೆಗೇರಿಸಿಕೊಂಡಿದ್ದ ಪತಿ ತನ್ನ ಪತ್ನಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ (Murder) ಮಾಡಿದ್ದ. ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ. ಸದ್ಯ ಇದೀಗ ಬಾಗಲೂರು ಪೊಲೀಸರು (Bagalur Police) ಆರೋಪಿಯ ಕೃತ್ಯ ಬಯಲು ಮಾಡಿದ್ದು ಆರೋಪಿ ಅರೆಸ್ಟ್ ಆಗಿದ್ದಾನೆ. ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡ್ತಿದ್ದ ಪತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮೆಹಬೂಬ್ ಪಾಷಾ(50) ಬಂಧಿತ ಕೊಲೆ ಆರೋಪಿ.

ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದ ಮೆಹಬೂಬ್, ಕೂಲಿ ಕೆಲಸ ಮಾಡಿಕೊಂಡು ಪತ್ನಿ ಮುಮ್ತಾಜ್ ಜೊತೆ ವಾಸವಿದ್ದ. ಆ.25ರಂದು ಪೊಲೀಸ್ ಠಾಣೆಗೆ ಬಂದು ನನ್ನ ಪತ್ನಿ ಕೊಲೆಯಾಗಿದ್ದಾಳೆ. ಅಪರಿಚಿತ ವ್ಯಕ್ತಿಗಳು ಸೀಬೆ ತೋಟದಲ್ಲಿ‌ ಕೊಲೆ ಮಾಡಿದ್ದಾರೆ ಎಂದು‌ ದೂರು ಕೊಟ್ಟಿದ್ದ. ಆ.24ರಂದು ನಾನು ಫಂಕ್ಷನ್​ಗೆ ಅಂತ ಹೊರಗಡೆ ಹೋಗಿದ್ದೆ. ಆ.24 ಸಂಜೆಯಿಂದ ಪತ್ನಿಗೆ ಕರೆ ಮಾಡಿದ್ರೆ ರಿಸೀವ್ ಮಾಡಿಲ್ಲ. ಬೆಳಗ್ಗೆ ತೋಟದ ಬಳಿ ಹೋದಾಗ ಪತ್ನಿ ಹೆಣವಾಗಿ ಬಿದ್ದಿದ್ದಳು. ಯಾರೋ ನನ್ನ ಪತ್ನಿಯನ್ನ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ.

ಇದನ್ನೂ ಓದಿ: ಬಾಗಲೂರು: ಮದ್ಯ ಸೇವಿಸಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಪತಿಯನ್ನೇ ಬಿಟ್ಟು ಹೋದ ಪತ್ನಿ

ಪೊಲೀಸರು ಕೂಡ ದೂರು ಸ್ವೀಕರಿಸಿ ತನಿಖೆ ಶುರು ಮಾಡಿದ್ರು. ಆದರೆ ಪೊಲೀಸರಿಗೆ ಈತನ ಮಾತಿನ ಮೇಲೆ ಅನುಮಾನ ಮೂಡಿತ್ತು. ಆರೋಪಿ ಮೆಹಬೂಬ್ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ. ಹೆಂಡತಿ‌ ಮೇಲೆ ಅನುಮಾನ ಪಟ್ಟು ತಾನೇ ಕೊಲೆಗೈದಿರೋದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಹಣ್ಣು ಕೀಳಬೇಕು ಬಾ ಎಂದು ಆ.24ರಂದು ತಾನು ಕೆಲಸ ಮಾಡ್ತಿದ್ದ ತೋಟಕ್ಕೆ ಆರೋಪಿ ಮೆಹಬೂಬ್ ತನ್ನ ಪತ್ನಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ‌ ಪತ್ನಿ ಜೊತೆ ಜಗಳ ತೆಗೆದು ಕಬ್ಬಿಣದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ‌ ಶವ ಅಲ್ಲೇ ಬಿಟ್ಟು ರಾತ್ರಿಯಿಡಿ ಮನೆಗೆ ಹೋಗದೆ ಹೊರಗಡೆಯೇ ಇದ್ದು ಬೆಳಗ್ಗೆ ಮನೆಗೆ ತೆರಳಿ ಏರಿಯಾದಲ್ಲಿ ಯಾರಿಗೂ ಅನುಮಾನ ಬರದ ಹಾಗೆ ಇದ್ದು ತಾನೇ ಹೋಗಿ ಪೊಲೀಸರಿಗೆ ದೂರು ನೀಡಿ ನ್ಯಾಯ ಕೊಡಿಸಿ ಅಂದು ಮೊಸಳೆ ಕಣ್ಣೀರು ಹಾಕಿದ್ದಾನೆ. ಸದ್ಯ ಆರೋಪಿ ಮೆಹಬೂಬ್ ಪೊಲೀಸರ ತನಿಖೆಯಲ್ಲಿ ಹತ್ಯೆಯ ಸತ್ಯ ಬಾಯ್ಬಿಟ್ಟಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕೃಷಿ ಕೆಲಸಕ್ಕೆ ಬಳಸುವ ಸಲಕರಣೆಯಿಂದ ತಲೆಗೆ ಹೊಡೆದು ಕೊಲೆ

ಇನ್ನು ಈ ಪ್ರಕರಣ ಸಂಬಂಧ ಈಶಾನ್ಯ ಡಿಸಿಪಿ ವಿ.ಜೆ.ಸಜಿತ್ ಪ್ರತಿಕ್ರಿಯೆ ನೀಡಿದ್ದಾರೆ. ಭಾನುವಾರ ಬಾಗಲೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಮುಮ್ತಾಜ್ ರನ್ನ ಕೊಲೆ ಮಾಡಲಾಗಿದೆ ಎಂದು ಪತಿ ಮೆಹಬೂಬ್ ಸಾಬ್ ದೂರು ನೀಡಿದ್ದರು. ವಿಚಾರಣೆಗೆ ಒಳಪಡಿಸಿದಾಗ ಅವರೇ ಕೊಲೆ ಮಾಡಿದ್ದಾರೆ ಎಂದು ಪತ್ತೆಯಾಗಿದೆ. ಮೆಹಬೂಬ್ ತಮ್ಮ ಮನೆಯನ್ನ ಮಾರಾಟ ಮಾಡಲು ಮುಂದಾಗಿರ್ತಾನೆ. ಆದರೆ ಹೆಂಡತಿ ಮುಮ್ತಾಜ್ ಇದಕ್ಕೆ ಒಪ್ಪಿಗೆ ನೀಡುವುದಿಲ್ಲ. ಜೊತೆಗೆ ಆಕೆಯ ವರ್ತನೆ ಮೇಲೆ ಅನುಮಾನ ಪಡುತ್ತಿರುತ್ತಾನೆ. ಆ.24 ಸಂಜೆ 8 ಗಂಟೆ ವೇಳೆ ತರಕಾರಿ ಕೀಳಲು ಕರ್ಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೃಷಿ ಕೆಲಸಕ್ಕೆ ಬಳಸುವ ಸಲಕರಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ವರದಿ: ಪ್ರದೀಪ್, ಟಿವಿ9 ಬೆಂಗಳೂರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Thu, 29 August 24