ಬಾಗಲೂರು: ಮದ್ಯ ಸೇವಿಸಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಪತಿಯನ್ನೇ ಬಿಟ್ಟು ಹೋದ ಪತ್ನಿ
ಮದ್ಯ ಸೇವಿಸಬೇಡ ಎಂದು ಬೈದು ಬುದ್ಧಿ ಹೇಳಿದಕ್ಕೆ ಗಂಡನನ್ನೇ ಬಿಟ್ಟು ಹೆಂಡತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಮಹಿಳೆಯ ಮನವೊಲಿಸಿ ಗಂಡ-ಹೆಂಡತಿಯ ಜಗಳಕ್ಕೆ ಅಂತ್ಯ ಹಾಡಿದ್ದಾರೆ.
ಬೆಂಗಳೂರು: ಮದ್ಯ ಸೇವಿಸುವ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ತವರು ಮನೆ ಸೇರಿದ ಅದೆಷ್ಟೋ ಪ್ರಸಂಗಗಳು ದಿನ ನಿತ್ಯ ನಡೆಯುತ್ತಲೇ ಇರುತ್ತವೆ. ಆದ್ರೆ ಇಲ್ಲೊಂಚೂರು ಬೇರೆ. ಮದ್ಯ ಸೇವಿಸಬೇಡ ಎಂದಿದ್ದಕ್ಕೆ ಪತಿಯನ್ನ ಪತ್ನಿ ಬಿಟ್ಟುಹೋಗಿದ್ದಾರೆ. ಇಂತಹದೊಂದು ಘಟನೆ ಬೆಂಗಳೂರಿನ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ಯ ಸೇವಿಸಬೇಡ ಎಂದು ಬೈದು ಬುದ್ಧಿ ಹೇಳಿದಕ್ಕೆ ಗಂಡನನ್ನೇ ಬಿಟ್ಟು ಹೆಂಡತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ದೂರು ದಾಖಲಾದ ಬಳಿಕ ಪೊಲೀಸರು ಮಹಿಳೆಯ ಮನವೊಲಿಸಿ ಗಂಡ-ಹೆಂಡತಿಯ ಜಗಳಕ್ಕೆ ಅಂತ್ಯ ಹಾಡಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಗಂಡ ಜಯಶಂಕರ್ ಮನೆಗೆ ತಂದು ಇಡುತ್ತಿದ್ದ ಮದ್ಯವನ್ನು ಪತ್ನಿ ಗೌರಮ್ಮ ತಾನೇ ಕುಡಿದು ಖಾಲಿ ಮಾಡುತ್ತಿದ್ದರು. ಅಲ್ಲದೆ ಗೌರಮ್ಮ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆ. ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಕುಡಿದು ಬರುತ್ತಿದ್ದರು ಹಾಗೂ ಗಂಡನ ಜೊತೆ ಗಲಾಟೆ ಮಾಡುತ್ತಿದ್ದರು. ಹೀಗಾಗಿ ಕೋಪಗೊಂಡ ಗಂಡ, ಪತ್ನಿಯನ್ನು ಮದ್ಯ ಸೇವಿಸದಂತೆ ಬೈದು ಬುದ್ದಿ ಹೇಳಿದ್ದರು. ಇದಕ್ಕೆ ಮನನೊಂದ ಗೌರಮ್ಮ ಫೆಬ್ರವರಿ 10ರಂದು ಮನೆ ಬಿಟ್ಟು ಹೋಗಿದ್ದಳು. ಬಳಿಕ ಜಯಶಂಕರ್ ಬಾಗಲೂರು ಠಾಣೆಗೆ ನಾಪತ್ತೆ ದೂರು ನೀಡಿದ್ದರು.
ತವರು ಸೇರಿದ್ದ ಹೆಂಡತಿಯ ಮನವೊಲಿಸಿ ಗೌರಮ್ಮನನ್ನು ಪೊಲೀಸರು ಠಾಣೆಗೆ ಕರೆತಂದು ದಂಪತಿಯ ನಡುವೆ ರಾಜಿ ಸಂಧಾನ ಮಾಡಿಸಿದ್ದಾರೆ. ಸದ್ಯ ಮದ್ಯದ ಬಾಟಲಿಯ ಜಗಳಕ್ಕೆ ಅಂತ್ಯ ಹಾಡಿದ್ದು ಮುಂದೆ ಈ ರೀತಿ ಆಗಬಾರದೆಂದು ಬುದ್ದಿವಾದ ಹೇಳಿದ್ದಾರೆ.
ಇದನ್ನೂ ಓದಿ: ಮದ್ಯಪಾನ ರಂಪಾಟದ ಜೊತೆಗೆ DySP ಲಕ್ಷ್ಮೀ ವಿರುದ್ಧ ಇತ್ತು ಮತ್ತೊಂದು ಗಂಭೀರ ಆರೋಪ!