ರಾಮನಗರ: ಇಂದು ಬೆಳಗ್ಗೆಯಿಂದ ಮಂಗಳೂರು, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Raid) ವ್ಯಾಪಕವಾಗಿ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಅನುಮಾನದ ಹಿನ್ನೆಲೆಯಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಕೊವಿಡ್ ಸಮಯದಲ್ಲಿ ನಡೆದ ವ್ಯವಹಾರ, ಆ ಸಂದರ್ಭದ ಆದಾಯ, ಬಾಕಿ ಉಳಿಸಿದ ತೆರಿಗೆ ಇತ್ಯಾದಿ ವಿಷಯಗಳ ಸುತ್ತ ಗಂಭೀರ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೆಂಗೇರಿ ಬಳಿಯ BGS ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಗಳೂರು ಹೊರವಲಯದ ಕುಂಬಳಗೋಡ ಸಮೀಪವಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇದಾಗಿದೆ. ಮೂರು ಕಾರು, ಹತ್ತಕ್ಕೂ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಸ್ಥೆಯ ಮ್ಯಾನೇಜರ್ ಶೇಖರ ಸ್ವಾಮೀಜಿ ಅವರ ವಿಚಾರಣೆ ನಡೆದಿದೆ.
ಕೇವಲ BGS ಮಾತ್ರವಲ್ಲದೇ ವಿವಿಧ ಸಂಸ್ಥೆಗಳ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದ್ದಾರೆ. ದೇವನಹಳ್ಳಿಯಲ್ಲಿ 25 ಎಕರೆ ಪ್ರದೇಶದಲ್ಲಿರುವ ಆಕಾಶ್ ಆಸ್ವತ್ರೆ, ಮೆಡಿಕಲ್ ಕಾಲೇಜ್ ಮತ್ತು ಶಾಲೆಗೆ 5 ಕಾರುಗಳಲ್ಲಿ ಬಂದ 15 ಜನ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆಕಾಶ್ ಆಸ್ಪತ್ರೆ ಮಾಲೀಕ ಮುನಿಯಪ್ಪ ಅವರ ಸಹಕಾರ ನಗರದ ನಿವಾಸದ ಮೇಲೂ ದಾಳಿ ಮಾಡಿದ್ದಾರೆ.
ಇದರೊಂದಿಗೆ ಮಲ್ಲೇಶ್ವರದ ಮಾರ್ಗೋಸ್ ರಸ್ತೆಯಲ್ಲಿರುವ, ದಯಾನಂದ ಅವರ ಒಡೆತನದ ಸಪ್ತಗಿರಿ ಅಸ್ಪತ್ರೆ ಹಾಗು ಮೆಡಿಕಲ್ ಕಾಲೇಜು. ತುಮಕೂರಿನಲ್ಲಿ ಹುಲಿಯಾರ್ ನಾಯಕ್ ಒಡೆತನದ ಶ್ರೀದೇವಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಹಾಗೂ ಸೋಮೇಶ್ವರದಲ್ಲಿ ಇರುವ ಅವರ ನಿವಾಸದ ಮೇಲೆಯೂ ದಾಳಿ ನಡೆಸಿದ್ದಾರೆ.