ಕೃತಕ ಬಣ್ಣ, ರಾಸಾಯನಿಕ ಬಳಸುವ ಹೋಟೆಲ್ಗಳಿಗೆ ಕಾದಿದೆ ಸಂಕಷ್ಟ: ಆಹಾರ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ
ಆಹಾರ ವಸ್ತುಗಳಲ್ಲಿ ಕಲಬೆರಕೆ, ರಾಸಾಯನಿಕ ಬಳಕೆ, ಅವಧಿ ಮೀರಿದ ಆಹಾರ ಇತ್ಯಾದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಆಹಾರ ಇಲಾಖೆ ಆಗಸ್ಟ್ 30 ಹಾಗೂ 31ರಂದು ಕರ್ನಾಟಕದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಿದೆ. ಹೋಟೆಲ್, ರೆಸ್ಟೋರೆಂಟ್, ಬೀದಿ ಬದಿಯ ಆಹಾರ ಅಂಗಡಿಗಳ ವಿರುದ್ಧ ಕಾರ್ಯಾಚರಣೆ ನಡೆಯಲಿದ್ದು, ಕಠಿಣ ಕ್ರಮ ಕೈಗೊಳ್ಳಲಿದೆ.
ಬೆಂಗಳೂರು, ಆಗಸ್ಟ್ 29: ಆಹಾರ ಇಲಾಖೆ ಅಧಿಕಾರಿಗಳು ಮಫ್ತಿಯಲ್ಲಿ ಬೆಂಗಳೂರಿನ ವಿಜಯನಗರದ ಸ್ಟ್ರೀಟ್ ಫುಡ್ ಅಂಗಡಿಗಳಿಗೆ ಭೇಟಿ ನೀಡಿ ಆಹಾರ ಗುಣಮಟ್ಟ ಪರಿಶೀಲನೆ ಮಾಡಿದ ಬೆನ್ನಲ್ಲೇ ಇದೀಗ ರಾಜ್ಯದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದೆ. ಶುಕ್ರವಾರ ಮತ್ತು ಶನಿವಾರ ಕರ್ನಾಟಕದಾದ್ಯಂತ ಹೋಟೆಲ್, ರೆಸ್ಟೋರೆಂಟ್ಗಳ ವಿರುದ್ಧ ಕಾರ್ಯಾಚರಣೆ ನಡೆಯಲಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿನ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನೂ ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು. ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹಣ್ಣು, ತರಕಾರಿಗಳ 385 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 266 ಮಾದರಿಗಳಲ್ಲಿ 239 ಸುರಕ್ಷಿತ, 27 ಅಸುರಕ್ಷಿತ ಎಂದು ಕಂಡುಬಂದಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ಹಣ್ಣು, ತರಕಾರಿಗಳಲ್ಲಿ ಕ್ರಿಮಿನಾಶಕ
ಅಸುರಕ್ಷಿತವೆಂದು ಕಂಡುಬಂದ ಮಾದರಿಗಳಲ್ಲಿ ಕ್ರಿಮಿನಾಶಕಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ. ಫಂಗಸ್ ಬೆಳವಣಿಗೆಯೂ ಪತ್ತೆಯಾಗಿದೆ. 211 ಪನ್ನೀರ್, 246 ಕೇಕ್, 67 ಕೋವಾದ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿಶ್ಲೇಷಣಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಜನರಿಗೆ ಟೆಸ್ಟ್ ಕಿಟ್!
ಜನರೇ ಅಹಾರದ ಗುಣಮಟ್ಟ ಪರೀಕ್ಷೆ ಮಾಡಿಕೊಳ್ಳುವ ಸಲುವಾಗಿ ಹೋಟೆಲ್, ರೆಸ್ಟೋರೆಂಟ್, ಫುಡ್ಪಾರ್ಕ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3400 ಟೆಸ್ಟಿಂಗ್ ಕಿಟ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹತಿ ನೀಡಿದ್ದಾರೆ.
ಇದನ್ನೂ ಓದಿ: ಜನರ ಕೈಗೇ ಇನ್ಮುಂದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್; ಸಾರ್ವಜನಿಕರೇ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಬಹುದು!
ಆಹಾರದ ಗುಣಮಟ್ಟ, ಆಹಾರ ಕಲುಷಿತಗೊಂಡಿರುವ ಪ್ರಮಾಣದ ಪರೀಕ್ಷೆ ಮಾಡುವ ಕಿಟ್ ಅನ್ನು ಜನರ ಕೈಗೆ ಕೊಡಲು ಆಹಾರ ಮತ್ತು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂಬ ಬಗ್ಗೆ ಕೆಲವು ದಿನಗಳ ಹಿಂದೆ ‘ಟಿವಿ9’ ವಿಸ್ತೃತ ವರದಿ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Thu, 29 August 24